
ಬೈಲಹೊಂಗಲ: ಸಮೀಪದ ಶ್ರೀಕ್ಷೇತ್ರ ಸೊಗಲ ಶ್ರೀ ಸೋಮೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರ ಹರ್ಷೋದ್ಗಾರದ ನಡುವೆ ಮಂಗಳವಾರ ಭವ್ಯ ರಥೋತ್ಸವ ನೆರವೇರಿತು. ಮೂರು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆದವು.
ಸೋಮೇಶ್ವರ ಹಾಗೂ ಶಿವ-ಪಾರ್ವತಿಯರ ದೇವಸ್ಥಾನದಲ್ಲಿ ಬುತ್ತಿ ಪೂಜೆ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಮೂರ್ತಿ ಪೂಜೆ, ಪ್ರಾರ್ಥನೆ, ಪುಷ್ಪಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು. ಎಲೆಗಳಿಂದ ಸೋಮೇಶ್ವರ, ಪಾರ್ವತಿ, ಪರಮೇಶ್ವರ ಗದ್ದುಗೆಯನ್ನು ಸಿಂಗರಿಸಲಾಗಿತ್ತು. ಮಹಾಮಂತ್ರಗಳಿಂದ ಭಜನೆ, ಮಿಡಕನಟ್ಟಿ ಹಾಲಸಿದ್ದೇಶ್ವರ, ಬೆನಕಟ್ಟಿ ದುರ್ಗಾದೇವಿ, ಹೊಸೂರ ಗ್ರಾಮದಿಂದ ಆಗಮಿಸಿದ ಸೋಮೇಶ್ವರ ಪಲ್ಲಕ್ಕಿ ಉತ್ಸವ ಅರ್ಥಪೂರ್ಣವಾಗಿ ನೆರವೇರಿತು.
ಸೇವಂತಿಗೆ, ಮಲ್ಲಿಗೆ, ಗುಲಾಬಿ, ಕನಕಾಂಬರ ಸೇರಿ ವಿವಿಧ ಹೂವುಗಳು, ಬಾಳೆ ಎಲೆ, ಕಬ್ಬು, ತೆಂಗಿನ ಗರಿಗಳಿಂದ ಅಲಂಕರಿಸಿದ ರಥದಲ್ಲಿ ಶಿವ-ಪಾರ್ವತಿ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವ ನೆರವೇರಿಸಲಾಯಿತು. ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸೋಮೇಶ್ವರ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿದರು. ಪುರವಂತರ ಒಡಪು, ನಂದಿಕೋಲು, ವಾದ್ಯ ಮೇಳಗಳಿಂದ ರಥ ಮುಂದೆ ಸಾಗಿತು. ಭಕ್ತರು ಹರ ಹರ ಮಹಾದೇವ ಎನ್ನುತ್ತ ರಥವನ್ನು ಶ್ರದ್ಧೆ, ಭಕ್ತಿಯಿಂದ ಎಳೆದರು.
ಜಾತ್ರೆ ಅಂಗವಾಗಿ ಅಯ್ಯಾಚಾರ, ಲಿಂಗದೀಕ್ಷೆ, ಧರ್ಮಸಭೆ, ರಾತ್ರಿ ಶಿವ-ಪಾರ್ವತಿಯರ ದೇವಸ್ಥಾನದಲ್ಲಿ ಅಕ್ಷತಾರೋಪಣ ನೆರವೇರಿತು. ಸಾವಿರಾರು ಯುವತಿಯರು, ಯುವಕರು ಜಲಧಾರೆಯಲ್ಲಿ ಪುಣ್ಯ ಸ್ನಾನ ಮಾಡಿದರು. ಮಡಿ ಬಟ್ಟೆ ಧರಿಸಿ ಕಂಕಣ ಕಟ್ಟಿಸಿಕೊಂಡರು. ಕಳೆದ ವರ್ಷ ಕಂಕಣ ಕಟ್ಟಿಸಿಕೊಂಡು ವಿವಾಹವಾದ ನವ ಜೋಡಿಗಳು ಆಗಮಿಸಿ ಹರಕೆ ತೀರಿಸಿದರು. ಗೋವಾ, ಮಹಾರಾಷ್ಟ್ರ, ಕೇರಳ, ಹೈದರಾಬಾದ್, ಕರ್ನಾಟಕದ ವಿವಿಧ ಭಾಗದಿಂದ ಬೆಳಗ್ಗೆಯಿಂದಲೇ ಬೈಕ್, ಚಕ್ಕಡಿ, ಟ್ರ್ಯಾಕ್ಟರ್ ಮುಖಾಂತರ ಆಗಮಿಸಿ ದರ್ಶನ ಪಡೆದರು. ದೇವಸ್ಥಾನವು ದೀಪಾಲಂಕರದಿಂದ ಕಂಗೊಳಿಸಿತು.
ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ, ಮಲ್ಲಣ್ಣ ಯಾದವಾಡ, ಶ್ರೀಕ್ಷೇತ್ರ ಸೊಗಲ ಜೀಣೋದ್ಧಾರ ಸಮಿತಿ ಪ್ರತಿನಿಧಿಗಳು, ಅರ್ಚಕರು, ಜಾತ್ರಾ ಕಮಿಟಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.