
ಬೈಲಹೊಂಗಲ: ತಾಲೂಕಿನ ತಿಗಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಟ್ರ್ಯಾಕ್ಟರ್–ಟ್ರೇಲರ್ ಕಳ್ಳತನ ಪ್ರಕರಣವನ್ನು ಬೈಲಹೊಂಗಲ ಪೊಲೀಸರು ಚಾಕಚಕ್ಯತೆಯಿಂದ ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಸುಮಾರು ₹11 ಲಕ್ಷ ಮೌಲ್ಯದ 1 ಟ್ರ್ಯಾಕ್ಟರ್ ಹಾಗೂ 4 ಟ್ರೇಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಐ ಪ್ರಮೋದ ಯಲಿಗಾರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವು ವೈಜ್ಞಾನಿಕ ತನಿಖಾ ವಿಧಾನಗಳನ್ನು ಬಳಸಿ, ಹೊನಗಾ ಗ್ರಾಮದ ಅರ್ಜುನ ಬಸವಂತ ಶೇಂದ್ರಿ (48) ಅವರನ್ನು ಬಂಧಿಸಿದೆ.
ಬೈಲಹೊಂಗಲ, ನೇಸರಗಿ, ಕಿತ್ತೂರು ಹಾಗೂ ನಂದಗಡ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಇನ್ನೂ 3 ಟ್ರೇಲರ್‌ಗಳು ಹಾಗೂ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಕೆಂಪು ಬಣ್ಣದ ಮಹೀಂದ್ರಾ ಟ್ರ್ಯಾಕ್ಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ರಾಮರಾಜನ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಪ್ರೋಬೇಶನರಿ ಅಧಿಕಾರಿ ಡಾ.ಭಾನು ಪ್ರಕಾಶ (ಐಪಿಎಸ್) ಹಾಗೂ ಡಿಎಸ್‌ಪಿ ಡಾ.ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡದಿಂದ ಯಶಸ್ವಿಯಾಗಿ ನೆರವೇರಿತು.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎಫ್.ವೈ.ಮಲ್ಲೂರ, ಗಂಗಾಧರ ಹಂಪಣ್ಣವರ, ಎಎಸ್‌ಐ ಎಂ.ಬಿ.ಉಪ್ಪಾರಟ್ಟಿ, ಎಎಸ್‌ಐ ಕೆ.ಆರ್.ಇಮಾಮನವರ, ಚೇತನ ಬುದ್ನಿ, ವಿಠ್ಠಲ ದೊಡ್ಡಹೊನ್ನಪ್ಪನವರ, ಎಂ.ಬಿ. ಗಿಡಗೇರಿ, ಎಂ.ಎಸ್. ದೇಶನೂರ, ಕೆ.ಎಫ್. ವಕ್ಕುಂದ, ನಾಗರಾಜ ಕಡಗನ್ನವರ, ಎಸ್.ಎಂ. ಮುರಗೋಡ, ಎಸ್.ಎ. ದಪೇದಾರ, ಸಚಿನ್ ಪಾಟೀಲ ಸೇರಿದಂತೆ ಬೆಳಗಾವಿ ತಾಂತ್ರಿಕ ವಿಭಾಗದ ಸಿಬ್ಬಂದಿ ಶ್ರಮಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಂಡವನ್ನು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.