ADVERTISEMENT

ಬೆಳಗಾವಿ: ಪ್ರಚಾರದಿಂದ ದೂರ ಉಳಿದ ಬಾಲಚಂದ್ರ, ರಮೇಶ

ಸತೀಶಗೆ ಸಾಥ್‌ ನೀಡಲು ಲಖನ್‌ ಹಿಂದೇಟು

ಎಂ.ಮಹೇಶ
Published 4 ಏಪ್ರಿಲ್ 2021, 18:42 IST
Last Updated 4 ಏಪ್ರಿಲ್ 2021, 18:42 IST
ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ
ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ   

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ (ಏ.17)ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಆದರೆ, ಇಲ್ಲಿನ ಪ್ರಭಾವಿ ರಾಜಕಾರಣಿಗಳೆನಿಸಿರುವ ಜಾರಕಿಹೊಳಿ ಸಹೋದರರು ಇನ್ನೂ ಪ್ರಚಾರ ಕಣಕ್ಕೆ ಇಳಿದಿಲ್ಲದಿರುವ ವಿಷಯವು ಹಲವು ಚರ್ಚೆ ಮತ್ತು ವಿಶ್ಲೇಷಣೆಗೆ ವಸ್ತುವಾಗಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳೂ ಬರುತ್ತವೆ. ಅವುಗಳನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ತಮ್ಮ ಪಕ್ಷದ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಪ್ರಚಾರಕ್ಕೆ ಬಂದಿಲ್ಲ. ಆ ಕ್ಷೇತ್ರದಲ್ಲಿ ಕಾರ್ಯಕರ್ತರಷ್ಟೆ ಭಾಗವಹಿಸುತ್ತಿದ್ದಾರೆ.

ಮುಖ್ಯಮಂತ್ರಿ ಮನವಿ ಮಾಡಿದ್ದರು: ತಮ್ಮ ವಿರುದ್ಧದ ಸಿ.ಡಿ. ಪ್ರಕರಣದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಾಗೂ ಬಂಧನ ಭೀತಿ ಎದುರಿಸುತ್ತಿರುವ ರಮೇಶ ಜಾರಕಿಹೊಳಿ ಪ್ರಚಾರ ಕಾರ್ಯದಲ್ಲಾಗಲೀ ಅಥವಾ ಕ್ಷೇತ್ರದಲ್ಲಾಗಲಿ ಕಾಣಿಸಿಕೊಂಡಿಲ್ಲ. ಅವರನ್ನು ರಕ್ಷಿಸುವುದಕ್ಕಾಗಿ ಶ್ರಮಿಸುತ್ತಿದ್ದಾರೆ ಎನ್ನಲಾಗುತ್ತಿರುವ ಬಾಲಚಂದ್ರ ಕೂಡ ಅರಭಾವಿಯಲ್ಲಿ ರಂಗಪ್ರವೇಶ ಮಾಡಿಲ್ಲ. ಚುನಾವಣೆ ಘೋಷಣೆಗೂ ಮುನ್ನವೇ ಕೆಲವು ಸಭೆಗಳನ್ನು ನಡೆಸಿದ್ದ ಅವರು ಬಳಿಕ ಸಕ್ರಿಯರಾಗಿಲ್ಲ. ಅವರು ತಮ್ಮ ಬೆಂಬಲಿಗರಿಗೆ ಇನ್ನೂ ಯಾವುದೇ ‘ಸಂದೇಶ’ ರವಾನಿಸಿಲ್ಲ ಎಂದೂ ಹೇಳಲಾಗುತ್ತಿದೆ. ‘ರಮೇಶ ಜಾರಕಿಹೊಳಿ ಕೂಡಲೇ ಪ್ರಚಾರದಲ್ಲಿ ತೊಡಗಿಕೊಳ್ಳಬೇಕು’ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಮನವಿ ಮಾಡಿದ್ದರು. ಇದಾಗಿ ಹಲವು ದಿನಗಳೇ ಕಳೆದಿವೆ.

ADVERTISEMENT

ಇನ್ನೊಂದೆಡೆ, ಗೋಕಾಕ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲಖನ್‌ ಜಾರಕಿಹೊಳಿ ತನ್ನ ಸಹೋದರ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಪರವಾಗಿ ಮತ ಯಾಚಿಸುತ್ತಿಲ್ಲ. ಗೋಕಾಕದಲ್ಲೇ ಇದ್ದರೂ ಚುನಾವಣೆಯಿಂದ ದೂರ ಉಳಿದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತನ್ನ ಬೆನ್ನಿಗೆ ನಿಂತಿದ್ದ ಅಣ್ಣ ಸತೀಶಗೆ ನೆರವಾಗದಿರುವುದು ಮತ್ತು ಅಂತರ ಕಾಯ್ದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದಿದ್ದಾರೆ: ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನ್‌ ಬಹಿರಂಗವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದರು. ‘ಪಕ್ಷದ ಹೈಕಮಾಂಡ್‌ ಅವರ ರಾಜೀನಾಮೆ ಪಡೆಯಬೇಕು’ ಎಂದೂ ಆಗ್ರಹಿಸಿದ್ದರು. ‘ಯಾರನ್ನು ನಂಬಿ ಯಾರು ಪ್ರಚಾರಕ್ಕೆ ಹೋಗುವುದು? ಡಿಕೆಶಿ ರಾಜೀನಾಮೆ ಕೊಟ್ಟರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಒಳ್ಳೆಯದಾಗುತ್ತದೆ. ಇಲ್ಲವಾದಲ್ಲಿ, ಪ್ರಚಾರ ಮಾಡಲು ಕಾರ್ಯಕರ್ತರಿಗೆ ಮುಜುಗರ ಆಗುತ್ತದೆ’ ಎಂದು ಹೇಳಿದ್ದರು. ಇದರಿಂದಾಗಿ ಗೋಕಾಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

‘ಚುನಾವಣೆಗೆ ಕೆಲವೇ ದಿನಗಳಿರುವಾಗ ಜಾರಕಿಹೊಳಿ ಸಹೋದರರು ಬೆಂಬಲಿಗರಿಗೆ ಯಾವ ಸಂದೇಶ ರವಾನಿಸುತ್ತಾರೆ ಎನ್ನುವುದರ ಮೇಲೆ ಗೋಕಾಕ ಹಾಗೂ ಅರಭಾವಿಯಲ್ಲಿನ ಲೆಕ್ಕಾಚಾರಗಳು ಬದಲಾಗಲಿವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.