
ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಪ್ರತಿಮೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮುಂತಾದವರು ಭಾಗವಹಿಸಿದ್ದರು
ಬೆಳವಡಿ (ಬೈಲಹೊಂಗಲ): ‘ಭಾರತೀಯ ಮಹಿಳಾ ಸೇನಾ ಪಡೆಗೆ ವೀರರಾಣಿ ಬೆಳವಡಿ ಮಲ್ಲಮ್ಮ ಹೆಸರು ನಾಮಕರಣ ಮಾಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿರುವ ವೀರರಾಣಿ ಬೆಳವಡಿ ಮಲ್ಲಮ್ಮನ ವಿಜಯೋತ್ಸವ ಅಂಗವಾಗಿ ಅಶ್ವಾರೂಢ ಮೂರ್ತಿಗೆ ಶನಿವಾರ ಗೌರವ ಸಮರ್ಪಿಸಿ ಅವರು ಮಾತನಾಡಿದರು.
‘ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳಾ ಸೈನ್ಯ ಕಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದೊಂದಿಗೆ ಹೋರಾಡಿ ವಿಜಯಶಾಲಿಯಾಗಿ ಸಹೋದರತ್ವ ಬಾಂಧವ್ಯ ಹೊಂದಿದ ವೀರ ಕನ್ನಡತಿ ಬೆಳವಡಿ ಮಲ್ಲಮ್ಮ. ಕನ್ನಡ-ಮರಾಠಿ ಭಾಷಿಕರೊಂದಿಗೆ ಬಾಂಧವ್ಯ ಬೆಸೆದ ಮಲ್ಲಮ್ಮಳ ಶೌರ್ಯ, ಸಾಹಸ, ನಾಡಪ್ರೇಮ ಇಂದಿನ ಯುವ ಪಿಳಿಗೆ ಸ್ಫೂರ್ತಿಯಾಗಿದೆ. ಯುವ ಪಿಳಿಗೆ ಮಲ್ಲಮ್ಮನ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
‘ವಿಪಕ್ಷದ ನಾಯಕ ಆರ್.ಅಶೋಕ ಅವರ ಜೊತೆ ಮಾತನಾಡಿ ವೀರರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಬರುವ ವಿಧಾನಸೌಧ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಅಗತ್ಯ ಬಿದ್ದರೆ ಸಾರ್ವಜನಿಕ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ರಾಣಿ ಮಲ್ಲಮ್ಮಳ ಜೀವನ ಚರಿತ್ರೆಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.
ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಮುಂದಿನ ಮುಖ್ಯಮಂತ್ರಿಯಾಗಿ ಬಸನಗೌಡ ಪಾಟೀಲ ಯತ್ನಾಳ ಅವರು ಮತ್ತೇ ಬೆಳವಡಿ ಗ್ರಾಮಕ್ಕೆ ಆಗಮಿಸಲಿ. ಜನರ ಹೃದಯದಲ್ಲಿ ಮುಖ್ಯಮಂತ್ರಿಯಾಗಿ ಅವರು ಕಂಗೊಳಿಸುತ್ತಿದ್ದಾರೆ. ಶೀಘ್ರದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿದರು. ನೂರಾರು ಸಾರ್ವಜನಿಕರು, ಅಭಿಮಾನಿ ಬಳಗದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.