ADVERTISEMENT

ಮೀಸಲಾತಿ ಕೊಟ್ಟರೆ ವಿಜಯೋತ್ಸವ, ಇಲ್ಲವಾದರೆ ಬಂಡಾಯ: ಮೃತ್ಯುಂಜಯ ಸ್ವಾಮೀಜಿ

ಚನ್ನಮ್ಮನ ಸಮಾಧಿ ಸ್ಥಳದಿಂದ ಸುವರ್ಣ ಸೌಧಕ್ಕೆ ಪಾದಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 6:50 IST
Last Updated 21 ಡಿಸೆಂಬರ್ 2022, 6:50 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): 'ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಡಿ.22ರಂದು ವಿಜಯೋತ್ಸವದ ದಿನ ಆಗಬೇಕೆ ಹೊರತು ಬಂಡಾಯದ ದಿನ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. 2ಎ ಮೀಸಲಾತಿ ನೀಡಿ ನ್ಯಾಯಕೊಡಿ' ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿಗೆ ಬುಧವಾರ ಪುಷ್ಪ ನಮನ ಸಲ್ಲಿಸಿ ಬೆಳಗಾವಿ ಕಡೆಗೆ ಪಾದಯಾತ್ರೆ ಆರಂಭಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಕೂಡಲ ಸಂಗಮದಿಂದ ಆರಂಭವಾದ ಪಂಚಮಸಾಲಿ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ದೊಡ್ಡ ಬೆಂಬಲ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತಾರೆಂಬ ವಿಶ್ವಾಸ ಇದೆ. ಆದರೆ ಮಾತು ಕೊಟ್ಟು ಎಲ್ಲೋ ಒಂದು ಕಡೆ ಪಂಚಮಸಾಲಿ ಸಮಾಜ ಬಾಂಧವರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಸಮಾಜ ಬಾಂಧವರು ಸಹನೆ ಕಳೆದುಕೊಳ್ಳುವುದಕ್ಕಿಂತ ಮುಂಚ್ಚೆ '2ಎ'ಮೀಸಲಾತಿ ಘೋಷಿಸಿ ಅಭಿನಂದನೆಗೆ ಪಾತ್ರರಾಗಬೇಕು' ಎಂದರು.

ADVERTISEMENT

'ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ ಕುಲದೇವತೆ ಆಗಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯಸ್ಥಳದಿಂದ ಸಂಪಗಾಂವ, ಚಿಕ್ಕಬಾಗೇವಾಡಿ, ಹಿರೇಬಾಗೇವಾಡಿ ಮಾರ್ಗವಾಗಿ ಬೆಳಗಾವಿ ಸುವರ್ಣ ಸೌಧಕ್ಕೆ ತೆರಳಿ ಪಂಚಶಕ್ತಿ ವಿರಾಟ ಸಮಾವೇಶ ನಡೆಸಲಾಗುತ್ತಿದೆ. ಈ ಭಾಗದ ಸಮಸ್ತ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಪ್ರದರ್ಶನ ಮಾಡಬೇಕು' ಎಂದರು.

ಮುಖಂಡ ವಿಜಯಾನಂದ ಕಾಶಪ್ಪನವರ ಮಾತನಾಡಿ, 'ಸಮಾವೇಶಕ್ಕೆ 25 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಸರ್ಕಾರ ಅಂತಿಮ ನಿರ್ಣಯ ಕೈಕೊಂಡರೆ ಗೌರವ ಸಲ್ಲಿಸುತ್ತೇವೆ. ಇಲ್ಲವಾದರೆ ಮಾಡುವ ಅವಮಾನ ಎದುರಿಸಬೇಕಾಗುತ್ತದೆ' ಎಂದರು.

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ರಾಜಶೇಖರ ಮೂಗಿ, ಎಫ್.ಎಸ್.ಸಿದ್ದನಗೌಡರ, ಎಸ್.ಬಿ.ಸಂಗನಗೌಡರ, ಬಸವರಾಜ ತಟವಟಿ, ಉಮೇಶ ಬೋಳೆತ್ತಿನ, ಶಿವಾನಂದ ಬೆಳಗಾವಿ, ರಾಜು ಸೊಗಲ, ಸುನೀಲ ಮರಕುಂಬಿ, ರಾಜು ನರಸಣ್ಣವರ, ನಿಂಗಪ್ಪ ಚೌಡನ್ನವರ, ಪಂಚಮಸಾಲಿ ಸಮಾಜದ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.