ಬೆಳಗಾವಿ: ‘ನಗರದಲ್ಲಿ ಈ ವರ್ಷ ಸಂಭ್ರಮದಿಂದ ಬಸವ ಜಯಂತಿ ಆಚರಣೆಗೆ ನಿರ್ಧರಿಸಿದ್ದೇವೆ. ಇದರ ಅಂಗವಾಗಿ ಏಪ್ರಿಲ್ 27ರಂದು ಬೃಹತ್ ಬೈಕ್ ರ್‍ಯಾಲಿ, ಮೇ 4ರಂದು ಮೆರವಣಿಗೆ ಆಯೋಜಿಸಿದ್ದೇವೆ‘ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಗತಿಕ ಲಿಂಗಾಯತ ಮಹಾಸಭೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ದಳ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಏಪ್ರಿಲ್ 30ರಂದು ಎಲ್ಲ ಸಂಘ–ಸಂಸ್ಥೆಗಳು ಮತ್ತು ಮನೆಗಳಲ್ಲಿ ಬಸವ ಜಯಂತಿ ಆಚರಿಸಲಾಗುವುದು’ ಎಂದರು.
‘ಏಪ್ರಿಲ್ 27ರಂದು ಬೆಳಿಗ್ಗೆ 8ಕ್ಕೆ ಬಸವೇಶ್ವರ ವೃತ್ತದಿಂದ ಬೈಕ್ ರ್‍ಯಾಲಿ ಆರಂಭಗೊಳ್ಳಲಿದೆ. ಟಿಳಕವಾಡಿಯ ಆರ್‌ಪಿಡಿ ಕಾಲೇಜು ವೃತ್ತ, ವಡಗಾವಿ, ಖಾಸಬಾಗ, ಶಹಾಪುರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ, ರವಿವಾರ ಪೇಟೆ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ರಾಣಿ ಚನ್ನಮ್ಮ ವೃತ್ತ, ಶಿವಬಸವ ನಗರ, ಮಹಾಂತೇಶ ನಗರ, ಶ್ರೀ ನಗರ, ಆಂಜನೇಯ ನಗರ ಮಾರ್ಗವಾಗಿ ಸಾಗಿ ರಾಮತೀರ್ಥ ನಗರ ತಲುಪಲಿರುವ ರ್‍ಯಾಲಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
‘ಮೇ 4ರಂದು ಬಸವೇಶ್ವರ ಪ್ರತಿಮೆಯೊಂದಿಗೆ ಭವ್ಯ ಮೆರವಣಿಗೆ ರಾಣಿ ಚನ್ನಮ್ಮ ವೃತ್ತದಿಂದ ಹೊರಡಲಿದ್ದು, ಕಾಕತಿವೇಸ್, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ ಮಾರ್ಗವಾಗಿ ಸಾಗಿ ಲಿಂಗರಾಜು ಕಾಲೇಜು ಮೈದಾನ ತಲುಪಲಿದೆ. ವಿವಿಧ ರೂಪಕಗಳು, ಕಲಾ ತಂಡಗಳು ಭಾಗವಹಿಸಲಿವೆ’ ಎಂದು ಹೇಳಿದರು.
ರತ್ನಪ್ರಭಾ ಬೆಲ್ಲದ, ಶಂಕರ ಗುಡಸ್, ಅಶೋಕ ಬೆಂಡಿಗೇರಿ, ರಮೇಶ ಕಳಸಣ್ಣವರ, ಎ.ವೈ.ಬೆಂಡಿಗೇರಿ, ಎಂ.ಎಂ.ಬಾಳಿ, ಬಾಲಚಂದ್ರ ಬಾಗಿ ಇತರರಿದ್ದರು.
‘ಬಸವ ಜಯಂತಿ ಜತೆಗೆ ರೇಣುಕಾಚಾರ್ಯರ ಜಯಂತಿ ಸಹ ಆಚರಿಸಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಅವರು, ಅಖಿಲ ಭಾರತ ವೀರಶೈವ ಮಹಾಸಭೆಗೆ ಕರೆ ನೀಡಿದ್ದರು. ಆದರೆ, ನಾವು ಬೆಳಗಾವಿಯಲ್ಲಿ ಎಲ್ಲ ಸಂಘಟನೆಯವರು ಸೇರಿ ಚರ್ಚಿಸಿ, ಬಸವ ಜಯಂತಿ ಮಾತ್ರ ಆಚರಣೆಗೆ ತೀರ್ಮಾನಿಸಿದ್ದೇವೆ. ಇದಕ್ಕೆ ವೀರಶೈವ ಮಹಾಸಭೆ ಜಿಲ್ಲಾ ಘಟಕವೂ ಸಹಮತ ಸೂಚಿಸಿದೆ’ ಎಂದು ಎಲ್ಲ ಮುಖಂಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಂಕರ ಬಿದರಿ ಹೇಳಿಕೆಯನ್ನೂ ಕೆಲವರು ಖಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.