
ರಾಮದುರ್ಗ: ದುಡಿದು ತಂದಿರುವ ಹಣದಲ್ಲಿ ದಾನ, ಧರ್ಮ ಮಾಡಿದರೆ ಮಾತ್ರ ಜೀವನದಲ್ಲಿ ಮುಕ್ತಿ ಪ್ರಾಪ್ತವಾಗಲಿದೆ. ಬಸವಣ್ಣ ಕಾಯಕದ ಮಹತ್ವನ್ನು ಜನತೆಗೆ ಸಾರಿದ್ದಾರೆ. ಬಸವ ತತ್ವದ ಆಧಾರದ ಮೇಲೆ ಅನೇಕ ಪವಾಡಗಳನ್ನು ಫಲಹಾರ ಶಿವಯೋಗಿಗಳು ಮಾಡಿದ್ದಾರೆ ಎಂದು ಖಜೂರಿ ಕೋರಣೇಶ್ವರ ಮಠದ ಮುರಘೇಂದ್ರ ಕೋರಣೇಶ್ವರ ಶಿವಯೋಗಿಗಳು ಹೇಳಿದರು.
ತಾಲ್ಲೂಕಿನ ಹೊಸಕೇರಿ-ಬಸವನಗರದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ರಾತ್ರಿ ಫಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಮಿಟಿ ಹೊಸಕೇರಿ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಹಮ್ಮಿಕೊಂಡ ‘ಬಸವಧರ್ಮ ದರ್ಶನ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ಬಸವನಗರ-ಹೊಸಕೇರಿ ಭಕ್ತಾದಿಗಳು ಪ್ರತಿ ವರ್ಷ ಮಕರ ಸಂಕ್ರಮಣ ಕಾಲದಲ್ಲಿ ಮೂರು ದಿನವಳವರೆಗೆ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ತಮ್ಮ ಕಾಯಕ ಧರ್ಮದೊಂದಿಗೆ ಪ್ರಸಾದ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ. ಧರ್ಮ ಗುರುಗಳು ಕೇವಲ ಮಠದಲ್ಲಿದ್ದುಕೊಂಡು ಮಠವನ್ನಷ್ಟೇ ಅಭಿವೃದ್ಧಿ ಮಾಡದೆ ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಹೊಸಕೇರಿ-ಬಸವನಗರದ ಮುರಘೇಂದ್ರ ಕೋರಣೇಶ್ವರ ವಿರಕ್ತಮಠದ ಪೀಠದ ಮಾತೆ ನೀಲಲೋಚನ ತಾಯಿ ಮಾತನಾಡಿ, ಮಠದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಹಾಸ್ಯ ಜಾನಪದ ಕಲಾವಿದ ಈರಪ್ಪ ಹೂಗಾರ ಸುಮಾರು 2 ಗಂಟೆ ಸಭಿಕರನ್ನು ರಂಜಿಸಿದರು. ಪತ್ರಕರ್ತ ಗೌಡಪ್ಪಗೌಡ ಪಾಟೀಲ, ಶ್ರೀ ಫಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಶಂಕರ ಅಂಗಡಿ, ಅರಹಟ್ಟಿ ಮುರುಘರಾಜೇಂದ್ರ ಕೋರಣೇಶ್ವರ ಮಠದ ತೋಟಪ್ಪ ಶರಣರು, ನಿರ್ಮಲಾ ಶಿವನಗೌಡ್ರ, ಮಹಾಲಿಂಗಯ್ಯ ಹಿರೇಮಠ, ಗ್ರಾಮದ ಮುಖಂಡರಾದ ಶಿವಪ್ಪ ಕಿತ್ತಲಿ, ಸಂಗಪ್ಪ ಕಿತ್ತಲಿ, ದೊಡ್ಡನಿಂಗಪ್ಪ ತಳವಾರ, ಯಲ್ಲಪ್ಪ ತಳವಾರ, ಭೀಮಪ್ಪ ಗಾಡದ, ಉಮೇಶ ಕನಕನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.