ADVERTISEMENT

ಬೆಳಗಾವಿ | ಪ್ರಭುತ್ವ ಕಾಲದಲ್ಲೇ ಪ್ರಜೆಗಳನ್ನು ಎತ್ತಿಕೊಂಡ ಬಸವಣ್ಣ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:52 IST
Last Updated 13 ಸೆಪ್ಟೆಂಬರ್ 2025, 5:52 IST
ಬಸವಣ್ಣ ಅವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ ವರ್ಷ ಗತಿಸಿದ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಗುರುವಾರ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಚಿಣ್ಣರು ಶರಣ–ಶರಣೆಯರ ವೇಷದಲ್ಲಿ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬಸವಣ್ಣ ಅವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ ವರ್ಷ ಗತಿಸಿದ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಗುರುವಾರ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಚಿಣ್ಣರು ಶರಣ–ಶರಣೆಯರ ವೇಷದಲ್ಲಿ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ‘ಪ್ರಜೆಗಳಿಗೆ ಅಧಿಕಾರವೇ ಇಲ್ಲದ ಪ್ರಭುತ್ವದ ಕಾಲದಲ್ಲಿ ಬಸವಣ್ಣ ಜನ ಸಮಾನತೆ ಸಂದೇಶ ಸಾರಿದರು. ಸಾಮಾಜಿಕ ನ್ಯಾಯ ಬೋಧಿಸಿದರು. ಲಿಂಗಾಯತ ಧರ್ಮದ ಅನುಷ್ಠಾನವನ್ನೂ ಮಾಡಿದರು. ಆದರೆ, ಇಂದು ಪ್ರಜಾಪ್ರಭುತ್ವ ಇದ್ದಾಗಿಯೂ ನಾವು ಧರ್ಮ ಅನುಸರಿಸದಿದ್ದರೆ ಶರಣರಿಗೆ ಮಾಡುವ ದ್ರೋಹವಾಗುತ್ತದೆ’ ಎಂದು ಗದಗ– ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಸಂಘಟನೆ ಸಂಯುಕ್ತವಾಗಿ ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿ ಗುರುವಾರ ಏರ್ಪಡಿಸಿದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಅವರು ಆಶೀರ್ವಚನ ನೀಡಿದರು.

‘ದೇಶದ ಶೇ 99ರಷ್ಟು ಮಂದಿ ಅಸ್ಪೃಶ್ಯರೇ ಆಗಿದ್ದಾಗ, ದೇವಸ್ಥಾನಕ್ಕೆ ಪ್ರವೇಶವೇ ಇಲ್ಲದಿದ್ದಾಗ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು. ಆ ಮೂಲಕ ಇಡೀ ದೇಶ ರಕ್ಷಿಸಿದವರು ಬಸವಣ್ಣ. ಇಲ್ಲದೇ ಹೋಗಿದ್ದರೆ ಬೇರೊಂದು ಧರ್ಮವು ಈ ದೇಶವನ್ನು ಆಕ್ರಮಿಸಿಕೊಳ್ಳುತ್ತಿತ್ತು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಬಸವ ಧರ್ಮ ಪೀಠಾಧಿಪತಿ ಗಂತಾ ಮಾತಾಜಿ ಅವರು, ‘ಲಿಂಗಾಯತ ಎನ್ನುವುದು ಪರಿಪೂರ್ಣ ಧರ್ಮ, ಸ್ವತಂತ್ರ ಧರ್ಮವಾಗಿದೆ. ಈಗ ಬೇಕಿರುವುದು ಸಾಂವಿಧಾನಿಕ ಮಾನ್ಯತೆ ಮಾತ್ರ. ಅದು ಸಿಗುವವರೆಗೂ ಹೋರಾಟ ನಿಲ್ಲದು’ ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಸಾನೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಾಪಕ ಶಿವಲಿಂಗ ಹೇಡೆ ‘ದಯವೇ ಧರ್ಮದ ಮೂಲ’ ಕುರಿತು ಹಾಗೂ ಚಿಗರಹಳ್ಳಿ ಸಿದ್ಧಬಸವ ಕಬೀರ ಸ್ವಾಮಿಜಿ ‘ಅಂತರಂಗ–ಬಹಿರಂಗ ಶುದ್ಧಿ’ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟನೆ ಮಾಡಿದ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರನ್ನು ಅಭಿನಂದಿಸಲಾಯಿತು.

ಅಕ್ಟೋಬರ್‌ 5ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಇಡೀ ರಾಜ್ಯ ಸಂಚರಿಸಿದ ಮೇಲೆ ನಾವೆಲ್ಲ ಬೆಂಗಳೂರಿನಲ್ಲಿ ಒಂದಾಗಿ ಶಕ್ತಿ ಪ್ರದರ್ಶಿಸಲು ಸೇರಬೇಕು
ಬಸವಲಿಂಗ ಪಟ್ಡದ್ದೇವರು ಭಾಲ್ಕಿ
ಕೆಲವು ಮಠಾಧೀಶರು ಇನ್ನೂ ಮುಂಚೂಣಿ ಆಂದೋಲನಕ್ಕೆ ಬಂದಿಲ್ಲ. ಹಿಂದೆ ನಿಂತು ಜೈ ಅನ್ನಬೇಡಿ. ಗಟ್ಟಿಯಾಗಿ ಲಿಂಗಾಯತರೆಂದು ಹೇಳಿಕೊಳ್ಳಿ. ಇಲ್ಲದಿದ್ದರೆ ಉಳಿಗಾಲವಿಲ್ಲ
ಶಿವಾನಂದ ಸ್ವಾಮೀಜಿ ಹಂದಿಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.