ADVERTISEMENT

ಬಿಡಿಸಿಸಿ ಬ್ಯಾಂಕ್‌: ಸಂಧಾನ ಸಭೆ, ರಮೇಶ ಕತ್ತಿ ಮುಂದುವರಿಕೆ

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರ ಅತೃಪ್ತಿ ಶಮನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:20 IST
Last Updated 22 ಡಿಸೆಂಬರ್ 2021, 16:20 IST
ಬೆಳಗಾವಿಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ನೇತೃತ್ವದಲ್ಲಿ ಬುಧವಾರ ಸಂಧಾನ ಸಭೆ ನಡೆಯಿತು
ಬೆಳಗಾವಿಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ನೇತೃತ್ವದಲ್ಲಿ ಬುಧವಾರ ಸಂಧಾನ ಸಭೆ ನಡೆಯಿತು   

ಬೆಳಗಾವಿ: ಇಲ್ಲಿನ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತು ಬ್ಯಾಂಕ್‌ನ ನಿರ್ದೇಶಕರ ನಡುವೆ ಬುಧವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಅಧ್ಯಕ್ಷ ಹುದ್ದೆಯಲ್ಲಿ ಕತ್ತಿ ಮುಂದುವರಿಯಲಿದ್ದಾರೆ. ನಿರ್ದೇಶಕರು ಹಾಗೂ ಅಧ್ಯಕ್ಷರ ನಡುವಿನ ಅಸಮಾಧಾನ ಸಂಚಲನ ಸೃಷ್ಟಿಸಿತ್ತು.

‘ಬಿರುಕು ಸಂಪೂರ್ಣ ನಿವಾರಣೆಯಾಗಿದ್ದು, ಕತ್ತಿ ಅವರಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಅವರ ನೇತೃತ್ವಕ್ಕೆ ಸಭೆಯಲ್ಲಿ ನಿರ್ದೇಶಕರು ಜೈ ಎಂದಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಕತ್ತಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ’.

ADVERTISEMENT

‘ರಮೇಶ ಅವರೆ ಪೂರ್ಣಾವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆಯೇ ನಮ್ಮ ಮುಂದಿಲ್ಲ. ಎಲ್ಲ ನಿರ್ದೇಶಕರನ್ನೂ ಗಣನೆಗೆ ತೆಗೆದುಕೊಂಡು ಪರಸ್ಪರ ಸಹಕಾರದ ಮೂಲಕ ಕತ್ತಿ ಕೆಲಸ ನಿರ್ವಹಿಸಲಿದ್ದಾರೆ. ಕೆಲ ಸಂದರ್ಭಗಳಲ್ಲಿ ಅಧ್ಯಕ್ಷರು ದೃಢ ನಿರ್ಧಾರ ಕೈಗೊಳ್ಳುತ್ತಿರುವುದರಿಂದ ಕೆಲವು ನಿರ್ದೇಶಕರಿಗೆ ಅಸಮಾಧಾನ ಆಗಿರಬಹುದು. ಇದರಿಂದ ಅಪಸ್ವರ ಎತ್ತಿರಬಹುದು. ಇದನ್ನೆಲ್ಲ ಪರಸ್ಪರ ಸೌಹಾರ್ದಯುತವಾಗಿ ಚರ್ಚಿಸಿ ಬಗೆಹರಿಸಲಾಗಿದೆ’ ಎಂದು ನಿರ್ದೇಶಕರೊಬ್ಬರು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿರುವ ನಮ್ಮ (ಜಾರಕಿಹೊಳಿ) ಮತ್ತು ಕತ್ತಿ ಕುಟುಂಬಗಳ ಮಧ್ಯೆ ಕೆಲವರು ವೈಷಮ್ಯ ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ತಮ್ಮ ರಾಜಕೀಯದ ದುರ್ಲಾಭ ಪಡೆಯಲು ಸಂಚು ಹೂಡುತ್ತಿದ್ದಾರೆ. ಯಾರು ಏನೇ ಷಡ್ಯಂತ್ರ ಮಾಡಿದರೂ ನಮ್ಮ ಕುಟುಂಬಗಳ ಮಧ್ಯೆ ಯಾವುದೇ ಕಾರಣಕ್ಕೂ ಬಿರುಕು ಮೂಡಲು ಸಾಧ್ಯವಿಲ್ಲ ಎಂದು ಬಾಲಚಂದ್ರ ತಿಳಿಸಿದ್ದಾರೆ’ ಎಂದು ಗೊತ್ತಾಗಿದೆ.

‘ರಮೇಶ ಕತ್ತಿ ಅವರೇ ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್‌ ಅನ್ನು ಮುನ್ನಡೆಸಲಿದ್ದಾರೆ. ನಿರ್ದೇಶಕರಲ್ಲಿ ಕೆಲವು ಭಿನ್ನಾಭಿಪ್ರಾಯ ಮೂಡುವುದು ಸ್ವಾಭಾವಿಕ. ಬ್ಯಾಂಕ್‌ನ ವಿಷಯದಲ್ಲಿ ಇತ್ತೀಚೆಗೆ ನಡೆದ ಕಹಿ ಘಟನೆಯನ್ನು ಎಲ್ಲರೂ ಮರೆಯಬೇಕು. ಎಲ್ಲರೂ ಒಗ್ಗಟ್ಟಾಗಿ ಬಿಡಿಸಿಸಿ ಬ್ಯಾಂಕ್‌ ಅನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಮಾಡೋಣ ಎಂದಿದ್ದಾರೆ’ ಎಂದು ತಿಳಿದುಬಂದಿದೆ.

ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡರ, ರಾಜೇಂದ್ರ ಅಂಕಲಗಿ, ಅಪ್ಪಾಸಾಬ ಕುಲಗುಡೆ, ಕೃಷ್ಣ ಅನಗೋಳಕರ, ಶಂಕರಗೌಡ ಪಾಟೀಲ, ಶ್ರೀಕಾಂತ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.