ಪ್ರಾತಿನಿಧಿಕ ಚಿತ್ರ
ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಪ್ರತಿಭಟನೆಗೆ ಮುಂದಾಗಿರುವ ನೌಕರರ ಮನವೊಲಿಸಲು, ಇಲ್ಲಿನ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರು ಭಾನುವಾರ ನಡೆಸಿದ ಸಭೆ ವಿಫಲವಾಯಿತು.
ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಅಪ್ಪಾಸಾಹೇಬ ಕುಲಗೂಡೆ, ಅರವಿಂದ ಪಾಟೀಲ, ವಿರೂಪಾಕ್ಷ ಮಾಮನಿ, ನಾನಾಸಾಹೇಬ ಪಾಟೀಲ ಹಾಗೂ ನೌಕರರ ಸಂಘದ ಪ್ರತಿನಿಧಿಗಳ ಜತೆಗೆ ಸಂಜೆ ಆರಂಭಗೊಂಡ ಸಭೆ 3 ತಾಸಿಗೂ ಅಧಿಕ ಸಮಯ ನಡೆಯಿತು.
‘ಗ್ರಾಹಕರ ಹಿತದೃಷ್ಟಿಯಿಂದ ಹೋರಾಟ ಕೈಬಿಟ್ಟು, ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಅಧ್ಯಕ್ಷ ಮತ್ತು ನಿರ್ದೇಶಕರು ಕೋರಿದರು.
ಆದರೆ, ‘ನಿಂಗಪ್ಪ ಕರೆಣ್ಣವರ ಅವರ ಹಲ್ಲೆ ಮಾಡಿದವರ ವಿರುದ್ಧ ಶಿಸ್ತು ಕ್ರಮವಾಗಬೇಕು. ಹಲ್ಲೆ ಮಾಡಿದವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಬೇಡಿಕೆ ಈಡೇರುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದು ನೌಕರರು ಸಂಘದವರು ಪಟ್ಟು ಹಿಡಿದರು.
‘ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನ ಯಾವುದೇ ಶಾಖೆಯಲ್ಲೂ ನೌಕರರು ಸೋಮವಾರ(ಜ.5) ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಬ್ಯಾಂಕ್‌ನ ಬೆಳಗಾವಿ ಪ್ರಧಾನ ಕಚೇರಿಯಲ್ಲಿ ಎಲ್ಲ ನೌಕರರು ಸೇರಿಕೊಂಡು ಪ್ರತಿಭಟಿಸುತ್ತೇವೆ’ ಎಂದು ಸಂಘದ ಉಪಾಧ್ಯಕ್ಷ ಆನಂದ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.