ADVERTISEMENT

ಅಥಣಿ ಆಸ್ಪತ್ರೆಯಲ್ಲಿ ಹಾಸಿಗೆ ಭರ್ತಿ: ಚಿಕಿತ್ಸೆಗಾಗಿ ಜನರ ಪರದಾಟ

ಪರಶುರಾಮ ನಂದೇಶ್ವರ
Published 5 ಮೇ 2021, 10:23 IST
Last Updated 5 ಮೇ 2021, 10:23 IST
ಅಥಣಿ ಸಾರ್ವಜನಿಕ ಆಸ್ಪತ್ರೆ
ಅಥಣಿ ಸಾರ್ವಜನಿಕ ಆಸ್ಪತ್ರೆ   

ಅಥಣಿ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ನ ಹಾಸಿಗೆಗಳು ಭರ್ತಿಯಾಗಿವೆ.

ಆಸ್ಪತ್ರೆಗೆ ದಾಖಲಾಗಲು ಬರುವವರಿಗೆ ‘ಹಾಸಿಗೆ ಇಲ್ಲ’ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿರುವುದು ಮತ್ತು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕೆಲವು ದಿನಗಳಿಂದ ಸಾಮಾನ್ಯವಾಗಿದೆ. ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಆಮ್ಲಜನಕ ಸಿಲಿಂಡರ್‌ಗಳನ್ನು ಹೊರಗಿನಿಂದ ತರುವಂತೆ ಹೇಳಲಾಗುತ್ತಿದೆ ಎಂಬ ದೂರುಗಳು ಕೂಡ ಕೇಳಿಬರುತ್ತಿವೆ.

ಆಮ್ಲಜನಕಸಹಿತ 50 ಹಾಸಿಗೆಗಳು ಭರ್ತಿಯಾಗಿವೆ. ಹೀಗಾಗಿ, ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ಹೋಗುವ ಮತ್ತು ಹಣ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಆಸ್ಪತ್ರೆಯಲ್ಲಿ ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮರಣ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಇಲ್ಲಿ ಹಾಸಿಗೆ ದೊರೆಯದೆ ಇರುವುದರಿಂದ, ಜಿಲ್ಲಾ ಕೇಂದ್ರ ಬೆಳಗಾವಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಹೋಗಬೇಕೆಂದರೆ 150 ಕಿ.ಮೀ. ಕ್ರಮಿಸಬೇಕು. ಪರಿಣಾಮ ತುರ್ತು ಸಂದರ್ಭದಲ್ಲಿ ರೋಗಿಯನ್ನು ಉಳಿಸಿಕೊಳ್ಳುವುದೆ ಸವಾಲಾಗಿ ಪರಿಣಮಿಸಿದೆ. ಅಂಥವರಿಗೆ ಸಹಾಯವಾಗಲೆಂದು ಜಿಲ್ಲಾಡಳಿತದಿಂದ ಇಲ್ಲಿಗೆ ಈಗಾಗಲೇ ಆರು ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಆದರೆ, ಅವುಗಳನ್ನು ಅಳವಡಿಸಿ ಬಳಸಿಕೊಳ್ಳಲು ಆಸ್ಪತ್ರೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ ಮತ್ತು ನಿರ್ಲಕ್ಷ್ಯಕ್ಕೂ ಕನ್ನಡಿ ಹಿಡಿದಿದೆ ಎಂದು ಆರೋಪಿಸಲಾಗುತ್ತಿದೆ.

‘ವೈದ್ಯರು, ರೋಗಿಗಳಿಗೆ ಹೊಗರಿನ ಔಷಧಿಗಳನ್ನು ಬರೆದುಕೊಡುತ್ತಿದ್ದಾರೆ ಎಂಬ ಆರೋಪವೂ ಇದೆ. ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನರ್ಸಗಳಿಗೆ ಕೆಲಸದ ಒತ್ತಡ ಹೆಚ್ಚಿದೆ. ರೋಗಿಗಳಿಗೆ ಕುಡಿಯುವ ನೀರು ಮತ್ತು ಬಿಸಿ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ಜನರು ಆರೋಪಿಸುತ್ತಿದ್ದಾರೆ.

‘ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಇಲ್ಲವೆಂದು ಹೇಳುತ್ತಾರೆ. ಆದರೆ, ನನ್ನ ತಂದೆಯನ್ನು ದಾಖಲಿಸಿದಾಗ ಹೊರಗಿನಿಂದ ಆಮ್ಲಜನಕ ಸಿಲಿಂಡರ್‌ ಮತ್ತು ಔಷಧಿಗಳನ್ನು ತರಲು ಹೇಳಿದರು. ನಮಗೇ ಹೀಗಾದರೆ ಸಾಮಾನ್ಯ ಹಾಗೂ ಬಡ ಜನರ ಪರಿಸ್ಥಿತಿ ಹೇಗೆ ಎನ್ನುವುದು ತಿಳಿಯುತ್ತಿಲ್ಲ’ ಎಂದು ಯುವ ಕಾಂಗ್ರೆಸ್‌ ಅಥಣಿ ಬ್ಲಾಕ್‌ ಅಧ್ಯಕ್ಷ ರವಿ ಬಡಕಂಬಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.