ADVERTISEMENT

ಬೆಳಗಾವಿ: 51 ಪ್ರಾಂಶುಪಾಲರ ಹುದ್ದೆಗಳು ಖಾಲಿ

ಸರ್ಕಾರಿ ಪಿಯು ಕಾಲೇಜುಗಳ ದುಃಸ್ಥಿತಿ

ಎಂ.ಮಹೇಶ
Published 27 ಸೆಪ್ಟೆಂಬರ್ 2019, 19:30 IST
Last Updated 27 ಸೆಪ್ಟೆಂಬರ್ 2019, 19:30 IST
   

ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ‍41 ಪ್ರಾಂಶುಪಾಲರ ಹುದ್ದೆಗಳು ಹಲವು ವರ್ಷಗಳಿಂದಲೂ ಖಾಲಿ ಇವೆ. ಇದರಿಂದಾಗಿ, ಶೈಕ್ಷಣಿಕ ಹಾಗೂ ಆಡಳಿತಾತ್ಮಕವಾಗಿ ತೊಂದರೆಯಾಗುತ್ತಿದೆ.

ಬೆಳಗಾವಿಯಲ್ಲಿ 145 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 182 ಪಿಯು ಕಾಲೇಜುಗಳಿವೆ. ಇಲ್ಲಿ 222 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಇದರೊಂದಿಗೆ ಪ್ರಾಂಶುಪಾಲರ ಹುದ್ದೆಯನ್ನೂ ಭರ್ತಿ ಮಾಡದಿರುವುದು ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಫಲಿತಾಂಶ ಸುಧಾರಣೆಗೂ ತೊಡಕಾಗಿ ಪರಿಣಮಿಸಿದೆ. ಹುದ್ದೆಗಳ ಭರ್ತಿ ಬದಲಿಗೆ, ಆಯಾ ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರಿಗೇ ‘ಪ್ರಭಾರ’ ವಹಿಸಲಾಗಿದೆ. ಅವರು ಉಪನ್ಯಾಸಕರು ಮತ್ತು ಪ್ರಾಂಶುಪಾಲ ಎರಡೂ ಪಾತ್ರಗಳನ್ನು ನಿರ್ವಹಿಸಬೇಕಾದ ಸ್ಥಿತಿ ಇದೆ. ಅವರು ಇಲಾಖೆಯ ತರಬೇತಿ, ಕಾರ್ಯಾಗಾರ ಮೊದಲಾದವುಗಳಲ್ಲೂ ಭಾಗವಹಿಸಬೇಕು.

ಪ್ರಾಂಶುಪಾಲರ ಹುದ್ದೆಗಳು ಖಾಲಿ ಇರುವ ಕಾಲೇಜುಗಳ ಪಟ್ಟಿಯನ್ನು ಇಲಾಖೆಯ ಜಾಲತಾಣದಲ್ಲಿಯೇ ಅಧಿಕೃತವಾಗಿ ಪ್ರಕಟಿಸಲಾಗಿದೆ. ಇದರಂತೆ ರಾಜ್ಯದಾದ್ಯಂತ ಒಟ್ಟು 534 ಹುದ್ದೆಗಳು ಖಾಲಿ ಇವೆ.

ADVERTISEMENT

ನೇಮಕಾತಿ ನಡೆಯುತ್ತಿಲ್ಲ:

‘ಕಾಲಕಾಲಕ್ಕೆ ಬಡ್ತಿ ಪ್ರಕ್ರಿಯೆ ಹಾಗೂ ನೇಮಕಾತಿ ನಡೆದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಹಳಷ್ಟು ಹಿರಿಯ ಉಪನ್ಯಾಸಕರಿದ್ದರೂ ಅವರಿಗೆ ಬಡ್ತಿ ದೊರೆಯುತ್ತಿಲ್ಲ. ಹೀಗಾಗಿ, ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಉಪನ್ಯಾಸಕರ ಹುದ್ದೆಗಳೂ ಭರ್ತಿಯಾಗುತ್ತಿಲ್ಲ. ಪರಿಣಾಮ, ಕಾರ್ಯಭಾರದ ಒತ್ತಡ ಉಂಟಾಗುತ್ತಿದೆ. ಇದರಿಂದಾಗಿ ಸಹಜವಾಗಿಯೇ ಗುಣಮಟ್ಟ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ’ ಎಂದು ಪ್ರಾಂಶುಪಾಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಡಿಡಿಪಿಯ ರಾಜಶೇಖರ ಪಟ್ಟಣಶೆಟ್ಟಿ, ‘ಕಾಯಂ ಪ್ರಾಂಶುಪಾಲರಿಲ್ಲದಿರುವ ಕಡೆಗಳಲ್ಲಿ ಹಿರಿಯ ಉಪನ್ಯಾಸಕರಿಗೆ ಜವಾಬ್ದಾರಿ ವಹಿಸಲಾಗಿದೆ. ಬೆಳಗಾವಿ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಪರಿಸ್ಥಿತಿ ಇದೆ. ಉಪಚುನಾವಣೆಯ ಮಾದರಿ ನೀತಿಸಂಹಿತೆ ತೆರವಾದ ನಂತರ ಸರ್ಕಾರದಿಂದ ಬಡ್ತಿ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಆಗ ಹಿರಿಯರಿಗೆ ಅಧಿಕೃತವಾಗಿಯೇ ಅವಕಾಶ ದೊರೆಯಲಿದೆ. ಅಲ್ಲಿವರೆಗೆ ಬೋಧನೆಯೊಂದಿಗೆ ಆಡಳಿತಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು’ ಎಂದು ತಿಳಿಸಿದರು.

ಎಲ್ಲೆಲ್ಲಿ ಖಾಲಿ?

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ: ಪಾಶ್ಚಾಪುರ, ನಾಗನೂರು, ಉರುಬಿನಹಟ್ಟಿ, ಬೋರಗಾಂವ, ಕೌಜಲಗಿ, ಗಳತಗಾ, ಬಾಡ, ನದಿಇಂಗಳಗಾಂವ, ಯಕ್ಸಂಬಾ, ಹುಕ್ಕೇರಿ, ಯರಗಟ್ಟಿ (ಹುಕ್ಕೇರಿ), ಹಳ್ಳೂರ, ಹಂದಿಗುಂದ, ಕೆರೂರ, ಬೆಳವಿ, ಉಳ್ಳಾಗಡ್ಡಿ ಖಾನಾಪುರ, ಅಥಣಿ ಮಹಿಳಾ ಪಿಯು ಕಾಲೇಜು, ಅಡಹಳ್ಳಿ, ಖಡಕಲಾಟ.

ಬೆಳಗಾವಿ ಶೈಕ್ಷಣಿಕ ಜಿಲ್ಲೆ: ಸರ್ದಾರ್ಸ್‌ ಕಾಲೇಜು, ದೊಡ್ಡವಾಡ, ದೇವಲಾಪುರ, ವಕ್ಕುಂದ, ವನ್ನೂರು, ಬೈಲವಾಡ, ಚಿಕ್ಕೊಪ್ಪ, ಸವದತ್ತಿ ಎಸ್‌ಜಿಸಿಸಿ ಪಿಯು ಕಾಲೇಜು, ಯರಗಟ್ಟಿ, ಗೋವಿನಕೊಪ್ಪ, ರಾಮದುರ್ಗ, ಯಕ್ಕುಂಡಿ, ನಾಗನೂರ, ಬಟಕುರ್ಕಿ, ಹಿರೇಬಾಗೇವಾಡಿ, ಸುರೇಬಾನ–ಮನ್ನಿಹಾಳ, ಮುಗಳಿಹಾಳ, ಹುಣಸೀಕಟ್ಟಿ, ಸಂಪಗಾಂವ, ಕಟಕೋಳ, ಸತ್ತಿಗೇರಿ, ಶಿರೋಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.