ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಬೆಳಗಾವಿ: ಜಪ್ತಿ ಮಾಡಿದ್ದ ಮರಳನ್ನು ವಿಲೇವಾರಿ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿಯಲ್ಲಿ ಗುರುವಾರ ₹ 15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಫಯಾಜ್ ಅಹ್ಮದ್ ಶೇಖ್ ಎಂಬ ಭೂವಿಜ್ಞಾನಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಅಥಣಿಯ ಶೀತಲ್ ಸನದಿ ಅವರ ಪರಿಚಿತರಾದ ಬಿ.ಕೆ.ಮಗದುಮ್ಮ ಅವರು, ಕಾಗವಾಡ ತಾಲ್ಲೂಕಿನ ಐನಾಪುರದ ಎಸ್‌ಸಿ ಕಾಲೊನಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿ ಕೈಗೊಂಡಿದ್ದರು. ಅಥಣಿ ತಾಲ್ಲೂಕಿನ ಐಗಳಿ ಗ್ರಾಮದಲ್ಲಿ ಜಪ್ತಿ ಮಾಡಿ ಇಟ್ಟಿದ್ದ ಮರಳನ್ನು ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರ ಮೂಲಕ ಪಡೆಯಲು ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಂಪರ್ಕಿಸಿದ್ದರು.
ಮರಳಿನ ವಿಲೇವಾರಿಗೆ ಫಯಾಜ್ ಅಹ್ಮದ್ ಶೇಖ್ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವ ಮತ್ತು ಮಾತುಕತೆ ಬಳಿಕ ₹15 ಸಾವಿರ ಲಂಚ ಪಡೆಯಲು ಒಪ್ಪಿರುವ ಬಗ್ಗೆ ಶೀತಲ್ ಸನದಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ನಿರೀಕ್ಷಕ ಎಸ್.ಎಚ್. ಹೊಸಮನಿ ಪ್ರಕರಣ ದಾಖಲಿಸಿದ್ದರು.
ಲೋಕಾಯುಕ್ತ ಎಸ್‌ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ಎಸ್.ಪಾಟೀಲ, ಭರತ ರೆಡ್ಡಿ ಎಸ್.ಆರ್. ಮತ್ತು ಸಿಬ್ಬಂದಿ ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.