ADVERTISEMENT

ಸೋರುವ ಶೆಲ್ಟರ್‌ಗಳು, ಹಲವು ಪರಿಕರ ಹಾಳು: ಕುಂದಾನಗರದ ‘ಕಹಿ’ ತಂಗುದಾಣಗಳು

ಸೋರುವ ಶೆಲ್ಟರ್‌ಗಳು, ಹಲವು ಪರಿಕರ ಹಾಳು, ಅಪಾಯ ಆಹ್ವಾನಿಸುತ್ತಿರುವ ಜೋತುಬಿದ್ದ ವಿದ್ಯುತ್‌ ತಂತಿಗಳು

ಇಮಾಮ್‌ಹುಸೇನ್‌ ಗೂಡುನವರ
Published 14 ಜುಲೈ 2025, 1:53 IST
Last Updated 14 ಜುಲೈ 2025, 1:53 IST
<div class="paragraphs"><p>ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದ ಬಳಿ ಇರುವ ಬಸ್‌ ತಂಗುದಾಣದ ದುಃಸ್ಥಿತಿ&nbsp; &nbsp; </p></div>

ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದ ಬಳಿ ಇರುವ ಬಸ್‌ ತಂಗುದಾಣದ ದುಃಸ್ಥಿತಿ   

   

ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ

ಬೆಳಗಾವಿ: ಸ್ಮಾರ್ಟ್‌ಸಿಟಿಯ ಪ್ರಯಾಣಿಕರ ತಂಗುದಾಣಗಳು ‘ಸ್ಮಾರ್ಟ್‌’ ಆಗಿ ಉಳಿದಿಲ್ಲ, ಕುಂದಾ ನಗರಿಯ ಬಸ್‌ ನಿಲ್ದಾಣಗಳೂ ‘ಸಿಹಿ’ಯಾಗಿ ಉಳಿದಿಲ್ಲ. ಇದರಿಂದ ಸಕ್ಕರೆ ನಾಡಿನ ಜನರಿಗೆ ‘ಕಹಿ’ ಅನುಭವಗಳು ತಪ್ಪಿಲ್ಲ!

ADVERTISEMENT

ರಾಜ್ಯದ ಎರಡನೇ ರಾಜಧಾನಿಯ ಮಾನ ಹಾಳು ಮಾಡಲು ಈ ಮುರುಕಲು ತಂಗುದಾಣಗಳೇ ಸಾಕು!

ಬೆಳಗಾವಿ ನಗರದ ವಿವಿಧ ಬಡಾವಣೆ ಮತ್ತು ಉಪನಗರಗಳಿಗೆ ನಿತ್ಯ 150 ಬಸ್‌ ಕಾರ್ಯಾಚರಣೆ ನಡೆಸುತ್ತವೆ. ಇವುಗಳಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗಲೆಂದು ವಿವಿಧ ಮುಖ್ಯರಸ್ತೆ, ವೃತ್ತ ಮತ್ತು  ಬಡಾವಣೆಗಳಲ್ಲಿ ಮಹಾನಗರ ಪಾಲಿಕೆ ಬಸ್‌ ತಂಗುದಾಣಗಳನ್ನು ನಿರ್ಮಿಸಿದೆ. 

ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ್ದ ಶೆಲ್ಟರ್‌ಗಳನ್ನೂ ನಿರ್ವಹಣೆಗಾಗಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಈ ಪೈಕಿ ಹಲವು ತಂಗುದಾಣ ದುಃಸ್ಥಿತಿ ತಲುಪಿವೆ.

ನಿಲ್ಲುವುದಾದರೂ ಎಲ್ಲಿ?: ‘ಸ್ವಲ್ಪ ಮಳೆಯಾದರೂ ಸಾಕು. ರಾಣಿ ಚನ್ನಮ್ಮನ ವೃತ್ತದ ಬಳಿ ಇರುವ ಬಸ್‌ ತಂಗುದಾಣ ಸೋರಲು ಆರಂಭಿಸುತ್ತವೆ. ಚಾವಣಿಯಿಂದ ಟಪ್‌... ಟಪ್‌... ಎಂದು ನೀರು ಬೀಳುತ್ತದೆ. ಮಳೆಯಿಂದ ರಕ್ಷಣೆಗಾಗಿ ಇವುಗಳನ್ನು ನಿರ್ಮಿಸಲಾಗಿದೆ. ಆದರೆ, ಇವುಗಳೇ ಸೋರತೊಡಗಿದರೆ ನಾವು ನಿಲ್ಲುವುದಾದರೂ ಎಲ್ಲಿ’ ಎಂಬುದು ಪ್ರಯಾಣಿಕರ ಪ್ರಶ್ನೆ.

‘ಕೋಟೆ ಕೆರೆಯಿಂದ ಧರ್ಮವೀರ ಸಂಭಾಜಿ ವೃತ್ತಕ್ಕೆ ಸಾಗುವ ಮಾರ್ಗದಲ್ಲಿನ ಬಸ್‌ ಶೆಲ್ಟರ್‌ಗಳನ್ನು ಬಿಡಾಡಿ ದನ ಪ್ರವೇಶಿಸಿ, ಗಲೀಜು ಸೃಷ್ಟಿಸುತ್ತಿವೆ. ನಿಯಮಿತವಾಗಿ ತಂಗುದಾಣ ಸ್ವಚ್ಛಗೊಳಿಸುತ್ತಿಲ್ಲ. ಕೆಲವೊಮ್ಮೆ ಬಿಡಾಡಿ ದಿನಗಳೇ ಇಡೀ ತಂಗುದಾಣ ಆವರಿಸುವುದರಿಂದ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ಹೊರಗೆ ನಿಲ್ಲುವಂತಾಗಿದೆ’ ಎನ್ನುವ ಆರೋಪ ಕೇಳಿಬರುತ್ತಿದೆ.

ಸಮಸ್ಯೆಗಳ ಸಾಲು: ಈ ತಂಗುದಾಣಗಳಲ್ಲಿನ ವಿವಿಧ ಪರಿಕರ, ಆಸನದ ಹಿಂಬದಿಯ ಆಸರೆ ಮುರಿದುಬಿದ್ದಿವೆ. ಚಾವಣಿ ಮುರಿದು ವಿದ್ಯುತ್‌ ತಂತಿಗಳು ಜೋತುಬಿದ್ದಿದ್ದು,  ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಬಸ್‌ ಸಂಚಾರದ ಮಾಹಿತಿ ನೀಡುವ ಎಲೆಕ್ಟ್ರಾನಿಕ್‌ ಫಲಕ ಬಂದ್‌ ಆಗಿರುವ ಸ್ಥಿತಿಯಲ್ಲಿದೆ. ಕೆಲವೆಡೆ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳೇ ಮಾಯವಾಗಿವೆ.

ಒಂದೆಡೆ ಬಸ್‌ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಕೆಲ ಬಡಾವಣೆಗಳಲ್ಲಿ ಪ್ರಯಾಣಿಕರಿಗಾಗಿ ತಂಗುದಾಣಗಳನ್ನೇ ನಿರ್ಮಿಸಿಲ್ಲ. ಅಂಥ ಕಡೆ ಜನರು ಬಸ್‌ಗಾಗಿ ಕಾಯುತ್ತ ರಸ್ತೆ ಅಥವಾ ಚರಂಡಿಗಳ ಬಳಿ ನಿಲ್ಲುತ್ತಿರುವುದು ಕಂಡುಬರುತ್ತಿದೆ.

ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಹಾಸ್ಟೆಲ್‌ಗೆ ಹೊಂದಿಕೊಂಡಿರುವ ಬಸ್‌ ತಂಗುದಾಣದ ಚಾವಣಿ ಮುರಿದಿರುವುದು
ಬೆಳಗಾವಿಯ ನ್ಯಾಯಾಲಯ ಆವರಣಕ್ಕೆ ಹೊಂದಿಕೊಂಡು ಇರುವ ತಂಗುದಾಣದಲ್ಲಿ ಬಸ್‌ಗಾಗಿ ಕಾಯುತ್ತ ವಿದ್ಯಾರ್ಥಿನಿಯರು ಕುಳಿತಿರುವುದು
ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಬಸ್‌ ತಂಗುದಾಣದಲ್ಲಿ ಜಾನುವಾರುಗಳು ಆಶ್ರಯ ಪಡೆದಿರುವುದು
ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದ ಬಳಿ ಇರುವ ಬಸ್‌ ತಂಗುದಾಣಕ್ಕೆ  ನೀರು ನುಗ್ಗಿರುವುದು   
ಬೆಳಗಾವಿಯಲ್ಲಿ ಶಿಕ್ಷಣ ಸಂಸ್ಥೆ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳು ತಂಗುದಾಣ ಹೆಚ್ಚಾಗಿ ಆಶ್ರಯಿಸಿದ್ದಾರೆ. ಇವುಗಳನ್ನು ಆದ್ಯತೆ ಮೇಲೆ ಅಭಿವೃದ್ಧಿಪಡಿಸಬೇಕು
ಸೃಜನ್‌ ಜೋಶಿ ವಿದ್ಯಾರ್ಥಿ
ನ್ಯಾಯಾಲಯ ಆವರಣಕ್ಕೆ ಹೊಂದಿಕೊಂಡ ಈ ತಂಗುದಾಣದಲ್ಲಿ ಕಸವನ್ನೇ ಗೂಡಿಸಿಲ್ಲ. ಹಾಗಾಗಿ ಎಲ್ಲಿ ಕುಳಿತುಕೊಳ್ಳಬೇಕು ಎಂದೇ ತಿಳಿಯುತ್ತಿಲ್ಲ
ಶಿವಕ್ಕ ಸನದಿ ಪ್ರಯಾಣಿಕರು

ಅಂದಗೆಟ್ಟ ಶೆಲ್ಟರ್‌ಗಳು

ಕೆಲವು ಶೆಲ್ಟರ್‌ಗಳಲ್ಲಿ ಜಾಹೀರಾತುಗಳ ಪ್ರದರ್ಶನಕ್ಕಾಗಿ ಡಿಜಿಟಲ್‌ ಫಲಕಗಳನ್ನು  ಅಳವಡಿಸಲಾಗಿತ್ತು. ಹಲವರು ಆ ಫಲಕಗಳ ಮೇಲೆ ನಿಯಮ ಬಾಹಿರವಾಗಿ ವಿವಿಧ ಜಾಹೀರಾತು ಮತ್ತು ಕರಪತ್ರ ಅಂಟಿಸಿದ್ದಾರೆ. ಕೆಲ ಪ್ರಯಾಣಿಕರು ತಂಬಾಕು ಉತ್ಪನ್ನ ಜಗಿದು ಅಲ್ಲಿಯೇ ಉಗುಳುತ್ತಿದ್ದಾರೆ. ನಿರ್ವಹಣೆ ಕೊರತೆಯಿಂದ ಒಂದೊಂದೇ ಪರಿಕರ ಕಳಚಿ ಬೀಳುತ್ತಿದ್ದು ತಂಗುದಾಣ ಅಂದಗೆಟ್ಟಿವೆ.

ತಂಗುದಾಣಕ್ಕೆ ನುಗ್ಗಿದ ನೀರು

ಬೆಳಗಾವಿಯಲ್ಲಿ ಇತ್ತೀಚೆಗೆ ಸುರಿದ ಸತತ ಮಳೆಯಿಂದ ಧರ್ಮವೀರ ಸಂಭಾಜಿ ವೃತ್ತದ ಬಳಿ ಇರುವ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಪಕ್ಕದ ಬಸ್‌ ತಂಗುದಾಣಗಳಿಗೂ ನುಗ್ಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.

ಟೆಂಡರ್‌ ಕರೆದಿದ್ದೇವೆ: ಆಯುಕ್ತೆ

‘ಟೆಂಡರ್‌ ಕರೆದಿದ್ದು ಶೀಘ್ರವೇ ಕಾರ್ಯಾದೇಶ ಕೊಟ್ಟು ಬಸ್‌ ಶೆಲ್ಟರ್‌ಗಳ ಸುಧಾರಣೆ ಮಾಡುತ್ತೇವೆ. ಚಾವಣಿ ಬದಲಿಸುತ್ತೇವೆ. ಹಾಳಾದ ಪರಿಕರ ದುರಸ್ತಿ ಮಾಡುವ ಜತೆಗೆ ಬಣ್ಣ ಬಳಿಸಿ ಆಕರ್ಷಣೀಯಗೊಳಿಸುತ್ತೇವೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶೆಲ್ಟರ್‌ಗಳಲ್ಲಿ ಯಾರಾದರೂ ನಿಯಮ ಉಲ್ಲಂಘಿಸಿ ಜಾಹೀರಾತು ಅಥವಾ ಕರಪತ್ರ ಅಂಟಿಸಿದರೆ ದಂಡ ವಿಧಿಸುತ್ತೇವೆ’ ಎಂದರು.

39 ತಂಗುದಾಣ ನಿರ್ಮಿಸಿದ್ದೆವು

‘ಬೆಳಗಾವಿಯ ವಿವಿಧ ಮಾರ್ಗಗಳಲ್ಲಿ 39 ಬಸ್‌ ತಂಗುದಾಣ ನಿರ್ಮಿಸಿದ್ದೆವು. ಪ್ರತಿ ಕಾಮಗಾರಿಗೆ ₹12 ಲಕ್ಷದಿಂದ ₹13 ಲಕ್ಷ ಖರ್ಚಾಗಿತ್ತು. ಸುಸ್ಥಿತಿಯಲ್ಲಿದ್ದ ಶೆಲ್ಟರ್‌ಗಳನ್ನು 2021–22ನೇ ಸಾಲಿನಲ್ಲಿ ನಿರ್ವಹಣೆಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದೇವೆ’ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಸಯೀದಾ ಆಫ್ರೀನ್‌ಭಾನು ಬಳ್ಳಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.