ADVERTISEMENT

ಬೆಳಗಾವಿ | ಉದ್ಯಮಿ ಅಪಹರಣ ಪ್ರಕರಣ; ಮುಖ್ಯ ಆರೋಪಿ ಮಂಜುಳಾ ಬಂಧನ

ಮೂಡಲಗಿ ತಾಲ್ಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಿಸಿ ₹5 ಕೋಟಿಗೆ ಬೇಡಿಕೆ ಇಟ್ಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 7:41 IST
Last Updated 3 ಮಾರ್ಚ್ 2025, 7:41 IST
<div class="paragraphs"><p>ಬಂಧಿತ ಮಹಿಳಾ‌ ನಾಯಕಿ&nbsp;ಮಂಜುಳಾ&nbsp;ರಾಮನಗಟ್ಟಿ</p></div>

ಬಂಧಿತ ಮಹಿಳಾ‌ ನಾಯಕಿ ಮಂಜುಳಾ ರಾಮನಗಟ್ಟಿ

   

ಬೆಳಗಾವಿ: ಮೂಡಲಗಿ ತಾಲ್ಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಿಸಿ ₹5 ಕೋಟಿಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ, ಮುಖ್ಯ ಆರೋಪಿಯಾದ ಗೋಕಾಕ ತಾಲ್ಲೂಕಿನ ಕೊಣ್ಣೂರಿನ ಮಂಜುಳಾ ರಾಮನಗಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

‘ಅಪಹರಣ ಪ್ರಕರಣದಲ್ಲಿ ಮಂಜುಳಾ ಪ್ರಮುಖ ಪಾತ್ರ ವಹಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ರಾಜಕೀಯ ಪಕ್ಷ ಮತ್ತು ಸಂಘಟನೆಯೊಂದಿಗೆ ಮಹಿಳೆ ಗುರುತಿಸಿಕೊಂಡಿದ್ದಾರೆ. ತಹಶೀಲ್ದಾರ್‌ ಕಚೇರಿಯಲ್ಲಿ ‘ಡಿ’ ದರ್ಜೆ ನೌಕರಿ ಮತ್ತು ಹೊರಗುತ್ತಿಗೆ ನೌಕರಿ ಕೊಡಿಸುವುದಾಗಿ ಇಬ್ಬರಿಂದ ತಲಾ ₹2.5 ಲಕ್ಷ ಲಂಚ ಪಡೆದ ಕುರಿತಾಗಿಯೂ ಕುಲಗೋಡ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಮಂಜುಳಾ ಜತೆಗೆ, ಯಲ್ಲೇಶ ವಾಲಿಕಾರ, ಪರಶುರಾಮ ಕಾಂಬಳೆ ಬಂಧಿಸಿ, ವಿಚಾರಣೆ ಮಾಡುತ್ತಿದ್ದೇವೆ’ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಯಾವ ರಾಜಕೀಯ ಪಕ್ಷದೊಂದಿಗೆ ಮಹಿಳೆ ಗುರುತಿಸಿಕೊಂಡಿದ್ದಾರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಒಂದು ರಾಜಕೀಯ ಪಕ್ಷದೊಂದಿಗೆ ಅವರು ಗುರುತಿಸಿಕೊಂಡಿದ್ದಾರೆ. ಆದರೆ, ಅಪಹರಣಕ್ಕೂ ಮತ್ತು ಆ ಪಕ್ಷಕ್ಕೂ ಯಾವ ಸಂಬಂಧವಿಲ್ಲ. ಈ ಪ್ರಕಣದಲ್ಲಿ ಮಂಜುಳಾ ಬಂಧಿಸದಂತೆ ಯಾವ ರಾಜಕಾರಣಿಯೂ ಪ್ರಭಾವ ಬೀರಿಲ್ಲ. ಒಂದುವೇಳೆ ಯಾರಾದರೂ ಪ್ರಭಾವ ಬೀರಿದ್ದರೆ, ಏಳು ಮಂದಿಯನ್ನು ಬಂಧಿಸಲು ಆಗುತ್ತಿರಲಿಲ್ಲ’ ಎಂದರು.

‘ಅಪಹರಣವಾದ ವ್ಯಕ್ತಿಗೂ, ಮಂಜುಳಾ ಅವರಿಗೂ ಹಣದ ವ್ಯವಹಾರವಿತ್ತೇ’ ಎಂಬ ಪ್ರಶ್ನೆಗೆ, ‘ನಮ್ಮ ಮಧ್ಯೆ ಹಣದ ಯಾವುದೇ ವ್ಯವಹಾರ ಇರಲಿಲ್ಲ ಎಂದು ಬಸವರಾಜ ಹೇಳುತ್ತಾರೆ. ಹಣದ ವ್ಯವಹಾರ ಇತ್ತೆಂದು ಮಹಿಳೆ ಹೇಳುತ್ತಾರೆ. ಈ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಗುಳೇದ ಉತ್ತರಿಸಿದರು.

‘ಬಸವರಾಜ ಅಂಬಿ ಅಪಹರಣಕ್ಕಾಗಿ ಮಂಜುಳಾ ಅವರೇ ಮುಖ್ಯವಾಗಿ ಸಂಚು ರೂಪಿಸಿದ್ದರು. ಇದಕ್ಕೆ ಸಹಕರಿಸಿದ ಆರೋಪಿಗಳಿಗೂ ಹಣ ಕೊಡುವುದಾಗಿ ತಿಳಿಸಿದ್ದರು. ಮಂಜುಳಾ ಪುತ್ರ ಈಶ್ವರನನ್ನು ಈಗಾಗಲೇ ಬಂಧಿಸಿದ್ದೆವು. ಹಣ ಮಾಡಬೇಕು, ಐಷಾರಾಮಿಯಾಗಿ ಬದುಕು ಸಾಗಿಸಬೇಕೆಂಬ ಆಸೆಯಿಂದ ಈ ಅಪಹರಣ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬಸವರಾಜ ಬಳಿ ಆರೋಪಿಗಳು ಕಸಿದುಕೊಂಡಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ 6 ಮೊಬೈಲ್‌, ನಾಲ್ಕು ಕಾರು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದರು.

‘ಮಂಜುಳಾ ಅವರಿಂದ ಯಾರಾದರೂ ಮೋಸಕ್ಕೆ ಒಳಗಾಗಿದ್ದರೆ, ಪೊಲೀಸರಿಗೆ ಮಾಹಿತಿ ಕೊಡಬೇಕು’ ಎಂದು ಕೋರಿದರು.

‘ಈ ಪ್ರಕರಣದಲ್ಲಿ ಈ ಹಿಂದೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಮತ್ತೆ ಮೂವರನ್ನು ಶನಿವಾರ ಬಂಧಿಸಿ, ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಮಂಜುಳಾ ಅವರನ್ನು ಕಲಬುರಗಿಯಲ್ಲಿ, ಯಲ್ಲೇಶನನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ’ ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ

ಫೆ.15ರಂದು ಬಸವರಾಜ ನೀಲಪ್ಪ ಅಂಬಿ (48) ಅವರು ತಮ್ಮ ಹೊಲದಿಂದ ಹಿಂತಿರುಗುತ್ತಿದ್ದಾಗ, ಅಪಹರಣ ಮಾಡಲಾಗಿತ್ತು. ಅಪಹರಿಸಿದವರು ಫೆ.15ರಂದು ಬಸವರಾಜ ಪತ್ನಿ ಶೋಭಾ ಅವರಿಗೆ ಕರೆ ಮಾಡಿ ₹5 ಕೋಟಿಗೆ ಬೇಡಿಕೆ ಇಟ್ಟಿದ್ದರು. ಬಸವರಾಜ ಅವರ ಪುತ್ರ ಹುಲಿರಾಜ ಹಾಗೂ ಕೆಲವರು ನಿಪ್ಪಾಣಿಯಲ್ಲಿ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ರಸ್ತೆಯಲ್ಲಿನ ಹೋಟೆಲ್‌ ಬಳಿ, ಸುಮಾರು ₹10 ಲಕ್ಷ ಪಾವತಿಸಲು ಹೋಗಿದ್ದರು. ಆದರೆ, ಅಪಹರಣಕಾರರು ಭೇಟಿಯಾಗಿರಲಿಲ್ಲ. ಬಸವರಾಜ ಬಿಡುಗಡೆ ಮಾಡಿರಲಿಲ್ಲ.

ಅಪಹರಣಕಾರರು ಮತ್ತೆ ಶೋಭಾ ಅವರಿಗೆ ಕರೆ ಮಾಡಿ, ‘ಹಣ ನೀಡಲು ಹೆಚ್ಚಿನ ಜನರೇಕೆ ಬಂದಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹಣ ಕೊಡದಿದ್ದರೆ ಬಸವರಾಜ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹುಲಿರಾಜ ಹಾಗೂ ಇತರ ಏಳು ಜನ ಸೇರಿಕೊಂಡು ಎಂಟು ಚೀಲಗಳಲ್ಲಿ ಹಣ ತುಂಬಿಕೊಂಡು ಆರೋಪಿಗಳು ಗೊತ್ತುಪಡಿಸಿದ ನಿಪ್ಪಾಣಿಯ ಮತ್ತೊಂದು ಸ್ಥಳಕ್ಕೆ ಹೋಗಿದ್ದರು. ಎರಡನೇ ಬಾರಿಯೂ ಅವರು ಹಣ ಪಡೆದಿರಲಿಲ್ಲ. ಹಾಗಾಗಿ ಶೋಭಾ ಅವರು ಘಟಪ್ರಭಾ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದರು.

ಸಚಿವ ಸತೀಶ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ ಅವರೊಂದಿಗೆ ಈ ಮಹಿಳೆ ಕ್ಲಿಕ್ಕಿಸಿಕೊಂಡ ಫೋಟೊಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

'ಆರೋಪಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ'

'ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಮಂಜುಳಾ ರಾಮನಗಟ್ಟಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ. ಅವರಿಗೆ ಪಕ್ಷದ ಯಾವುದೇ ಹುದ್ದೆ ಅಥವಾ ಸದಸ್ಯತ್ವ ಕೊಟ್ಟಿಲ್ಲ' ಎಂದು ಕಾಂಗ್ರೆಸ್ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.