ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಪರಿಷತ್ ಸಭೆಯಲ್ಲಿ ನಡಾವಳಿ ಮತ್ತಿತರ ದಾಖಲೆಗಳನ್ನು ಮರಾಠಿಯಲ್ಲಿ ನೀಡಬೇಕೆಂಬ ವಿಚಾರ ವಿವಾದಕ್ಕೆ ಕಾರಣವಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಬೆಂಬಲಿತ ಸದಸ್ಯ ರವಿ ಸಾಳುಂಕೆ, 'ಭಾಷಾ ಅಲ್ಪಸಂಖ್ಯಾತ ಕಾಯ್ದೆ ಪ್ರಕಾರ ನಮಗೆ ಸಭೆಯ ನಡಾವಳಿ ಹಾಗೂ ಇತರೆ ದಾಖಲೆಗಳನ್ನು ಮರಾಠಿಯಲ್ಲೇ ಕೊಡಬೇಕು' ಎಂದು ಒತ್ತಾಯಿಸಿದರು.
ಇದಕ್ಕೆ ಎಂಇಎಸ್ ಬೆಂಬಲಿತ ಸದಸ್ಯರಾದ ಶಿವಾಜಿ ಮಂಡೋಳಕರ, ವೈಶಾಲಿ ಭಾತಕಾಂಡೆ ಬೆಂಬಲ ಸೂಚಿಸಿದರು.
ಆಗ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, 'ಮಹಾರಾಷ್ಟ್ರದ ಅಕ್ಕಲಕೋಟೆ, ಜತ್ತ ನಲ್ಲಿ ಅಪ್ಪಟ ಕನ್ನಡಿಗರೇ ಹೆಚ್ಚಿದ್ದಾರೆ. ಆದರೆ, ಅಲ್ಲಿ ಮರಾಠಿಯಲ್ಲಿ ಮಾತ್ರ ದಾಖಲೆ ನೀಡಲಾಗುತ್ತಿದೆ. ಕನ್ನಡದಲ್ಲಿ ದಾಖಲೆ ಕೊಡುತ್ತಿಲ್ಲ. ಹೀಗಿರುವಾಗ ಬೆಳಗಾವಿ ಪಾಲಿಕೆಯಲ್ಲಿ ಮರಾಠಿಯಲ್ಲಿ ನಡಾವಳಿ ಕೊಡಬಾರದು' ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಕಾರ್ಯಸೂಚಿ ಪ್ರಕಾರವೇ ಸದನ ನಡೆಯಲಿ. ಅವಕಾಶ ಸಿಕ್ಕಾಗ ಸಾಳುಂಕೆ ಮಾತನಾಡಬೇಕು ಎಂದು ಹೇಳಿದರು.
ಆಡಳಿತಾರೂಢ ಬಿಜೆಪಿ ಸದಸ್ಯರು, ರವಿ ಸಾಳುಂಕೆ ವಿರುದ್ಧ ಹರಿಹಾಯ್ದರು. ನಾಡವಿರೋಧಿ ನಿಲುವು ತಳೆದ ಸದಸ್ಯನನ್ನು ಅನರ್ಹಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಸ್ಪರರ ಮಧ್ಯೆ ವಾಗ್ವಾದ ಜೋರಾಗುತ್ತಿದ್ದಂತೆ, ಮೇಯರ್ ಮಂಗೇಶ ಪವಾರ ಐದು ನಿಮಿಷವನ್ನು ಸಭೆ ಮುಂದೂಡಿದರು.
'ಕಾಂಗ್ರೆಸ್ ಸದಸ್ಯರ ಬೆಂಬಲದಿಂದಲೇ ರವಿ ಸಾಳುಂಕೆ ಹೀಗೆ ವರ್ತಿಸುತ್ತಿದ್ದಾರೆ. ಶಾಸಕ ಆಸಿಫ್ ಸೇಠ್ ಇಂಥವರನ್ನು ನಿಯಂತ್ರಿಸಬೇಕು' ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಸದ್ಯ ಸಭೆ ಆರಂಭವಾಗಿದ್ದು, 'ನಿಯಮದಂತೆ ಎಲ್ಲ ಸದಸ್ಯರು ಮಾತನಾಡಬೇಕು. ಏಕಾಏಕಿ ಯಾವುದೇ ವಿಷಯ ಪ್ರಸ್ತಾಪಿಸಿ ಗೊಂದಲ ಸೃಷ್ಟಿಸಬಾರದು' ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
'ಯಾವುದೇ ಸದಸ್ಯರು ನಿಯಮಾವಳಿ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು' ಎಂದು ಮೇಯರ್ ಮಂಗೇಶ ಪವಾರ ತಿಳಿಸಿದರು.
ನಂತರ ಕಾರ್ಯಸೂಚಿ ಪ್ರಕಾರ ವಿವಿಧ ವಿಷಯಗಳ ಕುರಿತಾಗಿ ಚರ್ಚೆ ಆರಂಭಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.