ADVERTISEMENT

ನೌಕರಿ ಆಮಿಷ ನೀಡಿ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 16:26 IST
Last Updated 19 ಆಗಸ್ಟ್ 2022, 16:26 IST
ಅಲ್ಲಪ್ರಭು ಹಿರೇಮಠ
ಅಲ್ಲಪ್ರಭು ಹಿರೇಮಠ   

ಮೂಡಲಗಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದಡಿ ತಾಲ್ಲೂಕಿನ ಹಳ್ಳೂರ ಗ್ರಾಮದಮನೋನ್ಮಯಿ ಮಹಾಸಂಸ್ಥಾನ ಪೀಠದ ಸ್ವಾಮೀಜಿ ಅಲ್ಲಮಪ್ರಭು ಸಿದ್ದಯ್ಯ ಹಿರೇಮಠ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೂಡಲಗಿಯ ನಿವಾಸಿ ಸಂತೋಷ ಹವಳೆವ್ವಗೋಳ ಅವರಿಗೆ ಪರಿಶಿಷ್ಟ ಕೋಟಾದಲ್ಲಿ ಡಿ ದರ್ಜೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಅಲ್ಲಮಪ್ರಭು ನಂಬಿಸಿದ್ದರು. ಅವರಿಂದ ಶಾಲಾ ದಾಖಲಾತಿಯೊಂದಿಗೆ ₹ 4 ಲಕ್ಷ ಪಡೆದಿದ್ದರು. ಮೂರು ತಿಂಗಳ ಮುಗಿದರೂ ನೌಕರಿ ಸಿಗದ ಕಾರಣ ಯುವಕ ಹಣ ಮರಳಿ ಕೇಳಿದ್ದರು. ಆ. 15ರಂದು ಮಧ್ಯಾಹ್ನ ಹಣ ವಾಪಸ್‌ ಕೇಳಲು ಬಂದಾಗ ಅಲ್ಲಮಪ್ರಭು ಹಾಗೂ ಅವರ ಸಹಚರರು ಚಾಕುವಿನಿಂದ ದಾಳಿ ಮಾಡಿದರು. ಅದರಿಂದ ಸಂತೋಷ ಹಾಗೂ ಅವರ ಸ್ನೇಹಿ ಬಸವರಾಜ ಗಾಯಗೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಆಧರಿಸಿ ಪೊಲೀಸರು ಗುರುವಾರ ಆರೋಪಿಯನ್ನು ಬಂಧಿಸಿದರು.

ADVERTISEMENT

ಇನ್ನೊಂದು ಪ್ರಕರಣ ದಾಖಲು: ಅಲ್ಲಮಪ್ರಭು ಅವರ ವಿರುದ್ಧ ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಆ. 14ರಂದು ದೂರು ದಾಖಲಿಸಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂ ಹ್ಯಾಕ್‌ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವುದಾಗಿ ನಂಬಿಸಿ ₹ 5 ಲಕ್ಷ ಹಣ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರಿನ ದೇವಿನಗರ ನಿವಾಸಿ ಪ್ರಶಾಂತಕುಮಾರ ಮೂಡಲಗಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸ್‌ಐ ಎಚ್.ವೈ. ಬಾಲದಂಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರೆ, ಇವಿಎಂ ಯಂತ್ರ ಹ್ಯಾಕ್‌ ಮಾಡಲು ಕುಮ್ಮಕ್ಕು ನೀಡಿ ಹಣ ಕೊಟ್ಟ ಆರೋಪ ಮತ್ತು ಕೊಟ್ಟವರು ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.

*

ದೊಡ್ಡವರೊಂದಿಗೆ ಸಂಪರ್ಕ ಹೊಂದಿದ್ದ ಸ್ವಾಮೀಜಿ

ಸಂಸಾರಿ ಆಗಿರುವ ಅಲ್ಲಮಪ್ರಭು ಹಿರೇಮಠ ಅವರಯ 2017ರಲ್ಲಿ ಹಳ್ಳೂರ ಗ್ರಾಮದ ಮನೋನ್ಮಯಿ ಮಹಾಸಂಸ್ಥಾನ ಪೀಠ ಸ್ಥಾಪಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಯಿಸಿ ಪೀಠ ಉದ್ಘಾಟಿಸಿದ್ದರು.

ವಾರಾಣಸಿಯಲ್ಲಿ ಪಿ.ಎಚ್‌ಡಿ. ಮಾಡಿರುವುದಾಗಿ ಹೇಳಿಕೊಂಡಿದ್ದ ಅವರು, 2015, 2016ರಲ್ಲಿ ಹಳ್ಳೂರ ಗ್ರಾಮಕ್ಕೆ ಹಲವು ಹಿರಿಯ ಸ್ವಾಮೀಜಿಗಳು ಮತ್ತು ಹಿಮಾಲಯದ ಅಘೋರಿ ಬಾಬಾ, ನಾಗಾ ಸಾಧುಗಳನ್ನು ಕರೆಯಿಸಿ ಹೋಮ ಮಾಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.