ADVERTISEMENT

ಬೆಳಗಾವಿ: ‍ಪತಿ– ಪತ್ನಿ ಕಲಹ ಕೊಲೆಯಲ್ಲಿ ಅಂತ್ಯ, ನಾಲ್ವರಿಗೆ ಗಾಯ

ವ್ಯಕ್ತಿ ಕೊಲೆ: ಇಬ್ಬರು ಎಂಜಿನಿಯರ್‌ಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 11:01 IST
Last Updated 17 ಜೂನ್ 2022, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ತಾಲ್ಲೂಕಿನ ಬಿ.ಕೆ. ಕಂಗ್ರಾಳಿಯಲ್ಲಿ ಗುರುವಾರ ತಡರಾತ್ರಿ ನಡೆದ ಕೌಟುಂಬಿಕ ಕಲಹದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಮಕ್ಕಳು ಗಾಯಗೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದರು.

ಇಲ್ಲಿನ ಹನುಮಾನ್‌ ನಗರದ ನಿವಾಸಿ ದೀಪಕ್‌ ಪಾಂಡುರಂಗ ವಾಕಡ (42) ಕೊಲೆಯಾದವರು. ಇವರ ಪತ್ನಿಯ ಅಣ್ಣಂದಿರಾದ ಚೇತನ್ ಲಕ್ಷ್ಮಣ ಹುರಡೆ ಹಾಗೂ ಸುಶಾಂತ್‌ ಲಕ್ಷ್ಮಣ ಹುರಡೆ ಬಂಧಿತರು. ಪತಿ– ‍ಪತ್ನಿ ನಡುವಿನ ಕಲಹವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಬಿ.ಕೆ. ಕಂಗ್ರಾಳಿಯ ದೀಪಾ ಹಾಗೂ ದೀಪಕ್‌ ಅವರಿಗೆ 18 ವರ್ಷಗಳ ಹಿಂದೆ ಮದುವೆಯಾಗಿದೆ. 15 ವರ್ಷ ಹಾಗೂ 12 ವರ್ಷದ ಇಬ್ಬರು ಮಕ್ಕಳೂ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಪತಿ– ಪತ್ನಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ದೀಪಾ ಆರು ತಿಂಗಳ ಹಿಂದೆ ಮಕ್ಕಳ ಸಮೇತ ತವರು ಮನೆ ಸೇರಿದ್ದರು.

ADVERTISEMENT

ಪದೇಪದೇ ಕರೆದರೂ ಪತ್ನಿ ಮನೆಗೆ ಮರಳಲಿಲ್ಲ. ಇದರಿಂದ ಬೇಸತ್ತ ದೀಪಕ್‌ ಗುರುವಾರ ರಾತ್ರಿ ಪತ್ನಿಯ ತವರು ಮನೆಗೆ ಹೋಗಿ ಜಗಳ ತೆಗೆದರು. ತಮ್ಮ ಬಳಿ ಇಟ್ಟುಕೊಂಡಿದ್ದ ಜಾಕುವಿನಿಂದ ಪತ್ನಿಗೆ ತಿವಿದರು. ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಅತ್ತೆ ಹಾಗೂ ತಮ್ಮ ಇಬ್ಬರು ಮಕ್ಕಳ ಮೇಲೂ ಹಲ್ಲೆ ಮಾಡಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಪ್ಪಿಸಿಕೊಂಡು ಓಡಿಹೋದ ದೀ‍ಪಾ ಅವರು ತಮ್ಮ ದೊಡ್ಡಪ್ಪನ ಮಕ್ಕಳಾದ ಚೇತನ್‌ ಹಾಗೂ ಸುಶಾಂತ್‌ ಅವರಿಗೆ ತಿಳಿಸಿದರು. ಕೋಪದಲ್ಲಿ ಬಂದ ಇಬ್ಬರೂ ಸಹೋದರು ಮಾರಕಾಸ್ತ್ರಗಳಿಂದ ದೀಪಕ್‌ ಅವರ ಮೇಲೆ ಹಲ್ಲೆ ಮಾಡಿದರು. ದೀಪಕ ಗಾಯಗೊಂಡು ನೆಲಕ್ಕೆ ಬಿದ್ದ ಮೇಲೆ ಇಬ್ಬರೂ ಪರಾರಿಯಾದರು ಎಂದೂ ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಕ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಆದರೂ ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ ಅವರು ಕೊನೆಯುಸಿರೆಳೆದರು.

ದೀಪಕ್‌ ಅವರ ಹಲ್ಲೆಯಿಂದ ಗಾಯಗೊಂಡ ಅವರ ಪುತ್ರ ದಿನೇಶ್‌ (15), ಪುತ್ರಿ ದಿಯಾ (12), ಪತ್ನಿ ದೀಪಾ ಹಾಗೂ ಅತ್ತೆ ಯಲ್ಲುಬಾಯಿ (68) ಅವರೂ ಆಸ್ಪತ್ರೆ ಸೇರಿದ್ದಾರೆ. ಇವರ ತಲೆ, ಕೈ, ಎದೆಭಾಗ, ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ ಗಾಯಗಳಾಗಿವೆ.

ಕೊಲೆಯಾದ ದೀಪಕ್‌ ಪೇಟಿಂಗ್ ಕೆಲಸ ಮಾಡುತ್ತಿದ್ದರು.‌ ಆರೋಪಿಗಳಾದ ಚೇತನ್‌ ಹಾಗೂ ಸುಶಾಂತ್‌ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದಾರೆ. ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ಮರಳಿದ್ದರು. ಸದ್ಯ ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.