ADVERTISEMENT

ಕುಂದಾನಗರಿ ವೈಭವದ ದಸರೆ: 'ಸೀಮೋಲ್ಲಂಘನೆ' ಬಳಿಕ ನಂತರ ಬನ್ನಿ ಮುಡಿದ ಬೆಳಗಾವಿಗರು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 13:03 IST
Last Updated 2 ಅಕ್ಟೋಬರ್ 2025, 13:03 IST
<div class="paragraphs"><p>ಬೆಳಗಾವಿಯ ಮರಾಠಿ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ಗುರುವಾರ ಸಂಜೆ ಸೀಮೋಲ್ಲಂಘನೆ ಕಾರ್ಯಕ್ರಮ ಮುಗಿದ ನಂತರ, ಬನ್ನಿ ಮುಡಿಯಲಾಯಿತು</p></div>

ಬೆಳಗಾವಿಯ ಮರಾಠಿ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ಗುರುವಾರ ಸಂಜೆ ಸೀಮೋಲ್ಲಂಘನೆ ಕಾರ್ಯಕ್ರಮ ಮುಗಿದ ನಂತರ, ಬನ್ನಿ ಮುಡಿಯಲಾಯಿತು

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಮಳೆ ಮಧ್ಯೆಯೂ ಈ ಬಾರಿ ಸಡಗರದ ನವರಾತ್ರಿ ಉತ್ಸವಕ್ಕೆ ನಗರ ಸಾಕ್ಷಿಯಾಯಿತು. 

ADVERTISEMENT

ಇಲ್ಲಿನ ಕ್ಯಾಂಪ್‌ ಪ್ರದೇಶದ ಮರಾಠಿ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ವಿಜಯದಶಮಿ ಪ್ರಯುಕ್ತ ಗುರುವಾರ ನಡೆದ ‘ಸೀಮೋಲ್ಲಂಘನೆ’ ಕಾರ್ಯಕ್ರಮದ ಮೂಲಕ ವೈಭವದ ದಸರೆ ಆಚರಣೆಗೆ ತೆರೆ ಎಳೆಯಲಾಯಿತು.

ಪಾಟೀಲ ಗಲ್ಲಿಯ ವತನದಾರ್‌ ಪಾಟೀಲ (ಪೊಲೀಸ್‌ಪಾಟೀಲ) ಮನೆತನದ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿದವು.

ಚವಾಟ್‌ ಗಲ್ಲಿಯಿಂದ ಹೊರಟ ಪಲ್ಲಕ್ಕಿ ಉತ್ಸವ ಮತ್ತು ಅಲಂಕೃತ ಎತ್ತುಗಳ ಮೆರವಣಿಗೆ ಮಾರುತಿ ಗಲ್ಲಿಯ ಮಾರುತಿ ಮಂದಿರದ ಬಳಿ ಆಗಮಿಸಿತು. ನಗರದ ವಿವಿಧ ದೇವಸ್ಥಾನಗಳ ಪಲ್ಲಕ್ಕಿಗಳು ಅಲ್ಲಿಗೆ ಬಂದು ಸಮಾವೇಶಗೊಂಡವು. ನಂತರ ಮುಖ್ಯ ಮೆರವಣಿಗೆ ಮರಾಠಿ ವಿದ್ಯಾನಿಕೇತನ ಶಾಲೆ ಮೈದಾನದತ್ತ ಸಾಗಿತು.

ಮಕ್ಕಳು, ಯುವಕ–ಯುವತಿಯರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಉತ್ಸಾಹದಿಂದ ಹೆಜ್ಜೆಹಾಕಿದರು. ಹೆಚ್ಚಿನವರು ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು. ಕಲಾವಿದರ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದಿತು.

ಸೀಮೋಲ್ಲಂಘನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಭಕ್ತರ ಜೈಕಾರ ಮುಗಿಲು ಮುಟ್ಟಿತ್ತು. ಅಲ್ಲಿ ಧಾರ್ಮಿಕ ಆಚರಣೆ ಕೈಗೊಂಡ ನಂತರ, ಬನ್ನಿ ಮುಡಿಯಲಾಯಿತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಭಕ್ತರ ಸಾಲು...

ನವರಾತ್ರಿ ಉತ್ಸವದ ಪ್ರಯುಕ್ತ, ನಗರದಲ್ಲಿ ಪ್ರಮುಖ ದೇಗುಲಗಳು 10 ದಿನ ಸಿಂಗಾರಗೊಂಡಿದ್ದವು. ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸಿದವು. ಬಹುತೇಕ ದೇಗುಲಗಳ ಆವರಣದಲ್ಲಿ ಭಕ್ತರ ಸಾಲು ಕಂಡುಬಂತು.

ವಿವಿಧ ಬಡಾವಣೆಗಳಲ್ಲಿ 160ಕ್ಕೂ ಅಧಿಕ ದುರ್ಗಾಮಾತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮೂರ್ತಿ ಪ್ರತಿಷ್ಠಾಪಿತ ಬಡಾವಣೆಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ವಿವಿಧ ಸಂಘಟನೆಯವರು ಆಯೋಜಿಸಿದ್ದ ದಾಂಡಿಯಾ ನೃತ್ಯದಲ್ಲಿ ಸಾವಿರಾರು ಯುವತಿಯರು, ಮಹಿಳೆಯರು ಮತ್ತು ಮಕ್ಕಳು ಹೆಜ್ಜೆಹಾಕಿ ಸಂತಸಪಟ್ಟರು.

ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆಯವರು ಆಯೋಜಿಸಿದ್ದ ದುರ್ಗಾಮಾತಾ ದೌಡ್‌ನಲ್ಲಿ ಸಾವಿರಾರು ಜನರು ಮಳೆಯನ್ನೂ ಲೆಕ್ಕಿಸದೆ ಉತ್ಸಾಹದಿಂದ ಹೆಜ್ಜೆಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.