ADVERTISEMENT

BDCC: ನಮ್ಮ ಪೆನಲ್‌ನ ನಿರ್ದೇಶಕರು ಪಕ್ಷಾಂತರ ಮಾಡುವುದಿಲ್ಲ- ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 14:21 IST
Last Updated 13 ಅಕ್ಟೋಬರ್ 2025, 14:21 IST
<div class="paragraphs"><p>ಬಾಲಚಂದ್ರ ಜಾರಕಿಹೊಳಿ</p></div>

ಬಾಲಚಂದ್ರ ಜಾರಕಿಹೊಳಿ

   

ಬೆಳಗಾವಿ: ‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪೆನಲ್‌ನ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಅವಿರೋಧ ಆಯ್ಕೆಯಾದ ಇತರೆ ಇಬ್ಬರು ಸದಸ್ಯರೂ ನಮ್ಮ ಪೆನಲ್‌ನ ಭಾಗವಾಗಿದ್ದಾರೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು 13 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದೆವು. ಚಿಕ್ಕೋಡಿ, ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿರಲಿಲ್ಲ. ಕಣದಲ್ಲಿದ್ದ ಬೇರೆ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಿ, ಬ್ಯಾಂಕಿನ ಹಿತಾಸಕ್ತಿಗಾಗಿ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಕೋರಿದೆವು. ಇದಕ್ಕೆ ಕೆಲವರು ಒಪ್ಪಿಕೊಂಡರು. ಕೆಲವರು ಒಪ್ಪಿಗೆ ಸೂಚಿಸಲಿಲ್ಲ’ ಎಂದು ತಿಳಿಸಿದರು.

ADVERTISEMENT

‘ನಮ್ಮ ಪೆನಲ್‌ನಿಂದ ಶಾಸಕ ವಿಶ್ವಾಸ ವೈದ್ಯ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ವಿರೂಪಾಕ್ಷಿ ಮಾಮನಿ, ಅರವಿಂದ ಪಾಟೀಲ, ನೀಲಕಂಠ ಕಪ್ಪಲಗುದ್ದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದರು.

‘ಚಿಕ್ಕೋಡಿ ಕ್ಷೇತ್ರದಿಂದ ಶಾಸಕ ಗಣೇಶ ಹುಕ್ಕೇರಿ ನಾಮಪತ್ರ ಸಲ್ಲಿಸಿದರು. ಸಚಿವ ಸತೀಶ ಜಾರಕಿಹೊಳಿ ಮತ್ತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು, ಹುಕ್ಕೇರಿ ಉಮೇದುವಾರಿಕೆ ಬೆಂಬಲಿಸಿದರು. ಹಾಗಾಗಿ ನಾವೂ ಹುಕ್ಕೇರಿ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಹೇಳಿದರು.

‘ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂದರ್ಭ ವಿವಿಧ ಸಮುದಾಯಗಳ ನಾಯಕರೊಂದಿಗೆ ಸಭೆ ನಡೆಸಿದವು. ಆಗ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಕುರುಬ ಸಮುದಾಯಕ್ಕೆ ಹಿಂದಿನಂತೆ ಪ್ರಾತಿನಿಧ್ಯ ನೀಡಲಾಗಿಲ್ಲ ಎಂಬ ಮಾತು ಕೇಳಿಬಂತು. ಹಾಗಾಗಿ ಕುರುಬ ಸಮುದಾಯದಲ್ಲಿ ಒಬ್ಬರನ್ನು ಸರ್ಕಾರವು ನಿಗಮ–ಮಂಡಳಿಗೆ ನಾಮನಿರ್ದೇಶನ ಮಾಡಲಿದೆ ಎಂದು ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಜೂನ್‌ನಲ್ಲಿ ನಾವು ಚುನಾವಣೆ ಪ್ರಚಾರ ಆರಂಭಿಸಿದೆವು. ಜಿಲ್ಲೆಯ ಜನರು ಮತ್ತು ಸಹಕಾರಿ ಸಂಸ್ಥೆಗಳು ಜಾರಕಿಹೊಳಿ ಕುಟುಂಬಕ್ಕೆ ಬೆಂಬಲವಾಗಿ ನಿಂತವು. ಸಹಕಾರಿ ಕ್ಷೇತ್ರದ ಹಿತದೃಷ್ಟಿಯಿಂದ ನಾವು ಎಲ್ಲರನ್ನೂ ಒಗ್ಗೂಡಿಸಿದ್ದೇವೆ’ ಎಂದರು.

‘ನಮ್ಮ ಪೆನಲ್‌ನ ಯಾವುದೇ ನಿರ್ದೇಶಕರು ಪಕ್ಷಾಂತರ ಮಾಡುವುದಿಲ್ಲ. ನಮ್ಮ ಕುಟುಂಬದ ವಿರುದ್ಧ ಕೆಲವರಿಂದ ಅಪಪ್ರಚಾರ ನಡೆದಿತ್ತು. ಆದರೆ, ಅವರ ಪ್ರಯತ್ನ ಕೈಹಿಡಿದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.