ADVERTISEMENT

ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ 28,29ರಂದು

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 13:02 IST
Last Updated 21 ಜೂನ್ 2019, 13:02 IST

ಬೆಳಗಾವಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ 28ರಿಂದ ಎರಡು ದಿನಗಳವರೆಗೆ ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಅವರ ಸರ್ವಾಧ್ಯಕ್ಷತೆಯಲ್ಲಿ ಗೋಕಾಕದ ಕೆ.ಎಲ್.ಇ. ಸಂಸ್ಥೆಯ ಶ್ರೀ ಎಂ.ಬಿ. ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆಯಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಯುವ ಧುರೀಣ ಲಖನ್‌ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ನಿಡಸೋಸಿ ಶ್ರೀ ದುರದುಂಡೀಶ್ವರಮಠದ ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಮತ್ತು ಗೋಕಾಕ ಶೂನ್ಯ ಸಂಪಾದನಾಮಠ ಶ್ರೀ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸುವರು’ ಎಂದರು.

‘ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಜಾನಪದ ತಜ್ಞರು, ಹಿರಿಯ ಸಾಹಿತಿಗಳಾದ ಜ್ಯೋತಿ ಹೊಸೂರು, ಚಿಂತಕ ಡಾ. ಗುರುರಾಜ ಕರ್ಜಗಿ, ಮುಖ್ಯ ಅತಿಥಿಗಳಾಗಿ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದ್ಯಸರಾದ ಪ್ರಭಾಕರ ಕೋರೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

ವಿಚಾರಗೋಷ್ಠಿ:

‘ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು’ ಕುರಿತು ಮೊದಲ ಗೋಷ್ಠಿ ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ‘ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಭವಿಷ್ಯ’ ಕುರಿತು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್‌ ಮನ್ನಿಕೇರಿ, ‘ಕನ್ನಡ ಭಾಷೆಯ ಅಸ್ಮಿತೆ ಮತ್ತು ತಂತ್ರಜ್ಞಾನ’ ಕುರಿತು ನವೋದಯ ಶಾಲೆಯ ಅಧ್ಯಾಪಕ ಮಾರುತಿ ದಾಸನ್ನವರ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಚಿಕ್ಕೋಡಿ ಡಿಡಿಪಿಐ ಎಂ.ಜಿ. ದಾಸರ ವಹಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಸರ್ವಾಧ್ಯಕ್ಷರ ಪರಿಚಯ ಮತ್ತು ಸಂವಾದಗೋಷ್ಠಿ ನಡೆಯಲಿದೆ. ಅಧ್ಯಕ್ಷತೆಯನ್ನು ಗೋಕಾಕ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ವ್ಹಿ. ಮಳಗಿ ವಹಿಸುವರು. ಸಮ್ಮೇಳನ ಸರ್ವಾಧ್ಯಕ್ಷರ ಬದುಕು– ಬರಹ ಕುರಿತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಲಿದ್ದಾರೆ.

29ರಂದು ಬೆಳಿಗ್ಗೆ 9.30ಕ್ಕೆ ಕವಿಗೋಷ್ಠಿ ಜರುಗುವುದು. ಅಧ್ಯಕ್ಷತೆಯನ್ನು ಗೋಕಾಕ ಸಾಹಿತಿ ಮಹಾಲಿಂಗ ಮಂಗಿ ವಹಿಸುವರು. ಧಾರವಾಡ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಡಾ. ಬಸು ಬೇವಿನಗಿಡದ ವಹಿಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ‘ವೈಚಾರಿಕ’ ಎಂಬ ನಾಲ್ಕನೇಯ ಗೋಷ್ಠಿ ಜರುಗುವುದು. ಮುಂಡರಗಿ- ಬೈಲೂರು ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ರಂಗರಾಜ ವನದುರ್ಗ ವಹಿಸುವರು. ‘ಯುವ ಜನಾಂಗದ ತವಕ- ತಲ್ಲಣ’ ಕುರಿತುಲೇಖಕ ಸಿದ್ಧಾರ್ಥ ವಾಡೆನ್ನವರ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಐದನೇಯ ಗೋಷ್ಠಿ ‘ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಅಂದು- ಇಂದು’ ಜರುಗುವುದು.
ಅಧ್ಯಕ್ಷತೆಯನ್ನು ಮೂಡಲಗಿ ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ವಹಿಸುವರು. ‘ಬೆಳಗಾವಿ ಜಿಲ್ಲೆಯ ಸಾಹಿತ್ಯ-ಅಂದು’ ಕುರಿತು ಕಲ್ಲೋಳಿಯ ಪ್ರಾಚಾರ್ಯರಾದ ಸುರೇಶ ಹನಗಂಡಿ ಹಾಗೂ ‘ಬೆಳಗಾವಿ ಜಿಲ್ಲೆಯ ಸಾಹಿತ್ಯ- ಇಂದು’ ಕುರಿತು ಹುಬ್ಬಳ್ಳಿ ಪ್ರಾಧ್ಯಾಪಕ ವೈ.ಎಂ.ಭಜಂತ್ರಿ ಮಾತನಾಡಲಿದ್ದಾರೆ.

ಮಧ್ಯಾಹ್ನ 2ಕ್ಕೆ ಸಾಧಕರ ಸನ್ಮಾನ ನಡೆಯಲಿದೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ ಹಾಗೂ 6ಕ್ಕೆ ಸಾಂಸ್ಕ್ರತಿಕ
ಕಾರ್ಯಕ್ರಮಗಳು ಜರುಗುವವು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೋಕಾಕ ತಾಲ್ಲೂಕು ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಬೆಳಗಾವಿ ತಾಲ್ಲೂಕು ಕಸಾಪ ಅಧ್ಯಕ್ಷ ಬಸವರಾಜ ಸಸಾಲಟ್ಟಿ, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಬದಾಮಿ, ರಾಮದುರ್ಗ ತಾಲ್ಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಖಾನಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ವಿಜಯ ಬಡಿಗೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.