ಬೆಳಗಾವಿ: ‘ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಮೂರು ಜಿಲ್ಲೆ ರಚಿಸುವ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ 18 ಶಾಸಕರನ್ನು ಮಾತ್ರ ಆಹ್ವಾನಿಸದೆ, ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಕನ್ನಡ ಹೋರಾಟಗಾರರು ಆಗ್ರಹಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಮಾಲೋಚನೆ ಸಭೆಯಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ತೀವ್ರ ಚರ್ಚೆಗೆ ಒಳಪಟ್ಟಿತು.
‘ಕನ್ನಡ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೈಗೊಳ್ಳುವ ನಿರ್ಧಾರದ ದುಷ್ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಹೊಣೆ ಆಗುತ್ತದೆ’ ಎಂದು ಹೋರಾಟಗಾರರು ಎಚ್ಚರಿಸಿದರು.
‘ಜಿಲ್ಲೆ ವಿಭಜಿಸುವ ಮುನ್ನ, ನಾಡು–ನುಡಿ, ಗಡಿಯ ಸೂಕ್ಷ್ಮತೆಯನ್ನು ಸರ್ಕಾರ ಅರಿಯಬೇಕು. 1997ರಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರ ಜಿಲ್ಲೆ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆ ರಚಿಸುವುದಾಗಿ ಘೋಷಿಸಿತ್ತು. ಜನತಾ ದಳದಲ್ಲಿದ್ದ ಜಿಲ್ಲೆಯ 11 ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕನ್ನಡಿಗರ ಭಾವನೆ ಕಡೆಗಣಿಸಿ ಈ ನಿರ್ಧಾರ ಕೈಗೊಂಡಿತ್ತು. ಇದನ್ನು ವಿರೋಧಿಸಿ ನಡೆದ ತೀವ್ರ ಚಳವಳಿ ಪರಿಣಾಮ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಿತು. ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥವಾಗುವವರೆಗೂ ಜಿಲ್ಲೆ ವಿಭಜಿಸುವುದಿಲ್ಲ ಎಂದು ಘೋಷಿಸಿತು. ಈ ಸಂಗತಿಯನ್ನು ಈಗಿನ ಸರ್ಕಾರವೂ ಅರಿಯಬೇಕು’ ಎಂದರು.
‘ಬೆಳಗಾವಿ ಜಿಲ್ಲೆ ವಿಭಜನೆಯ ಸಾಧಕ–ಬಾಧಕ ಅಂಶಗಳ ಸರ್ಕಾರ ವಿಸ್ತೃತವಾಗಿ ಚರ್ಚಿಸಬೇಕು’ ಎಂದು ಆಗ್ರಹಿಸಿದರು.
‘ಬೆಳಗಾವಿಯ ನೆಹರೂ ನಗರದಲ್ಲಿನ ಕನ್ನಡ ಭವನವನ್ನು ಖಾಸಗಿ ಸಂಘ ಅಕ್ರಮವಾಗಿ ನಿರ್ವಹಿಸುತ್ತಿದೆ. ಇದನ್ನು ನಿರ್ವಹಣೆಗಾಗಿ ಬೆಳಗಾವಿ ಜಿಲ್ಲಾಧಿಕಾರಿ ರಚಿಸಿದ ಸಮಿತಿ ಆದೇಶಗಳಿಗೆ ಧಾರವಾಡದ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಅದನ್ನು ತೆರವುಗೊಳಿಸಿ, ಕನ್ನಡ ಭವನವನ್ನು ಬಾಡಿಗೆಗಾಗಿ ಅತಿ ಕಡಿಮೆ ದರಕ್ಕೆ ನೀಡಲು ಪ್ರಾಧಿಕಾರ ಬದ್ಧವಾಗಿದೆ’ ಎಂದು ಸೋಮಣ್ಣ ಬೇವಿನಮರದ ಭರವಸೆ ನೀಡಿದರು.
ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆ ರಾಜ್ಯ ಘಟಕದ ಅಧ್ಯಕ್ಷ ಮಹಾದೇವ ತಳವಾರ, ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹಿರೇಕೊಡಿ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಆರ್.ಅಭಿಲಾಷ, ಗಡಿನಾಡು ಕನ್ನಡಿಗರ ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕೋಲಾ, ಕನ್ನಡ ಜಾಗೃತಿ ಸಮಿತಿ ಸದಸ್ಯೆ ಕಸ್ತೂರಿ ಭಾವಿ, ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಹಂಜಿ, ರಾಜೇಶ್ವರಿ ಹಿರೇಮಠ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.