ADVERTISEMENT

ಗಡಿ ವಿವಾದ ಬಗೆಹರಿಸಲಿ: ಮೋದಿ, ಶಾಗೆ ರಾವುತ್‌ ಸವಾಲು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 6:58 IST
Last Updated 15 ಏಪ್ರಿಲ್ 2021, 6:58 IST

ಬೆಳಗಾವಿ: ‘ಕರ್ನಾಟಕದ ಗಡಿಯಲ್ಲಿ ಮರಾಠಿ ಭಾಷಿಗರು ಆರು ದಶಕಗಳಿಂದ ಅನ್ಯಾಯ ಅನುಭವಿಸುತ್ತಿದ್ದಾರೆ. ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವನ್ನು ಬಗೆಹರಿಸುವ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತೋರಿಸಬೇಕು. ನಮ್ಮ ನೋವುಗಳಿಗೆ ಪೂರ್ಣವಿರಾಮ ನೀಡಬೇಕು’ ಎಂದು ಶಿವಸೇನಾ ನಾಯಕ ಸಂಜಯ ರಾವುತ್ ಆಗ್ರಹಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ ಪರವಾಗಿ ‍ಇಲ್ಲಿನ ಖಡೇಬಜಾರ್‌ನಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಪಶ್ಚಿಮ ಬಂಗಾಳಕ್ಕೆ ಹೋಗಿ, ಅಲ್ಲಿನ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇವೆ ಎಂದು ಮೋದಿ ಹಾಗೂ ಶಾ ಮಾತನಾಡುತ್ತಾರೆ. ಅದರ ಬದಲಿಗೆ, ಇಲ್ಲಿ ಮರಾಠಿ ಭಾಷಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ತಮ್ಮದೇ ಪಕ್ಷದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವು ಕರ್ನಾಟಕದಲ್ಲಿ ಕೊಡುತ್ತಿರುವ ತೊಂದರೆಗಳು ಮತ್ತು ಎಸಗುತ್ತಿರುವ ಅನ್ಯಾಯದ ಬಗ್ಗೆ ಪ್ರಧಾನಿ ಮತ್ತು ಗೃಹಸಚಿವರು ಕಣ್ಮುಚ್ಚಿ ಕುಳಿತಿದ್ದಾರೆ. ದೇಶದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿರುವ ಇಲ್ಲಿನ ವಿವಾದವನ್ನು ಬಗೆಹರಿಸಲು ಕ್ರಮ ಕೈಗೊಂಡಿಲ್ಲ. ಆಗ ಕಾಂಗ್ರೆಸ್‌ನವರು ತಪ್ಪು ಮಾಡಿರಬಹುದು. ಆದರೆ, ಈಗ ಬಿಜೆಪಿಯವರು ಸರಿಪಡಿಸಬೇಕಲ್ಲವೇ?’ ಎಂದು ಕೇಳಿದರು.

‘ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಕೆಗೆ ತಡೆ ಒಡ್ಡುವುದನ್ನು ಮಹಾರಾಷ್ಟ್ರ ಸರ್ಕಾರವು ಮಾಡಬಹುದಿತ್ತು. ಆದರೆ, ಮಾಡಿಲ್ಲ. ಅಂತಹ ಮಟ್ಟಕ್ಕೆ ಹೋಗಿಲ್ಲ. ಯಳ್ಳೂರಿನಲ್ಲಿ ಭಗವಾಧ್ವಜ ತೆರವುಗೊಳಿಸುವ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ತುಳಿಯಲಾಯಿತು. ಇಲ್ಲಿನ ಮರಾಠಿ ಭಾಷಿಗರು ವಿಭಜನೆ ಆಗುವ ಬದಲಿಗೆ ಒಂದಾಗುವ ಮೂಲಕ ಈ ಉಪ ಚುನಾವಣೆಯಲ್ಲಿ ಎಂಇಎಸ್ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.