ADVERTISEMENT

ಬೆಳಗಾವಿಯಲ್ಲಿ ಭದ್ರತಾ ಪಡೆಗಳ ಪಥಸಂಚಲನ: ಜನರ ವಿಶ್ವಾಸ ವೃದ್ಧಿಗೆ ಕ್ರಮ ಎಂದ ಡಿ.ಸಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 8:16 IST
Last Updated 10 ಏಪ್ರಿಲ್ 2021, 8:16 IST
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಶನಿವಾರ ನಡೆದ ಪೊಲೀಸರ ಪಥಸಂಚಲನದಲ್ಲಿ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಡಾ‌.ಕೆ. ಹರೀಶ್ ಕುಮಾರ್, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಶನಿವಾರ ನಡೆದ ಪೊಲೀಸರ ಪಥಸಂಚಲನದಲ್ಲಿ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಡಾ‌.ಕೆ. ಹರೀಶ್ ಕುಮಾರ್, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.   

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಏ. 17ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ವೃದ್ಧಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌)ಯವರು ಮತ್ತು ಪೊಲೀಸರು ಇಲ್ಲಿ ಶನಿವಾರ ಪಥಸಂಚಲನ ನಡೆಸಿದರು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾದ ಪಥಸಂಚಲನಕ್ಕೆ ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶಕುಮಾರ್ ಹಸಿರು ನಿಶಾನೆ ತೋರಿಸಿದರು.

ಬಳಿಕ ಮಾತನಾಡಿದ ಅವರು, ‘ಉಪ ಚುನಾವಣೆಯನ್ನು ಸುಗಮ ಮತ್ತು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾರರು ಯಾವುದೇ ಆತಂಕವಿಲ್ಲದೆ ನಿರ್ಭಿತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭದ್ರತೆ ಸೇರಿದಂತೆ ಎಲ್ಲ ಪೂರಕ ಕ್ರಮಗಳ ಬಗ್ಗೆ ಜನರಲ್ಲಿ ವಿಶ್ವಾಸ ವೃದ್ಧಿಸಲು ಪಥಸಂಚಲನ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಮುಂಬರುವ ದಿನಗಳಲ್ಲಿ ಆಯ್ದ ವಲ್ನರೇಬಲ್ (ದುರ್ಬಲ) ಹಾಗೂ ಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲೂ ಭದ್ರತಾ ಪಡೆಗಳ ಪಥಸಂಚಲನ ನಡೆಸಲಾಗುವುದು’ ಎಂದರು.

ಸಿ.ಆರ್.ಪಿ.ಎಫ್, ರಾಜ್ಯ ಮೀಸಲು ಪೊಲೀಸ್ ಪಡೆಗಳು, ನಗರ ಪೊಲೀಸ್, ಗೃಹರಕ್ಷಕ ದಳದವರು ಪಾಲ್ಗೊಂಡಿದ್ದರು. ಖಡಕ್‌ ಗಲ್ಲಿ, ಖಂಜರ್‌ಗಲ್ಲಿ, ಖಡೇಬಜಾರ್ ಮೊದಲಾದ ಕಡೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಡಿಸಿಪಿಗಳಾದ ಯಶೋದಾ ವಂಟಗೋಡಿ, ಮುತ್ತುರಾಜ್, ಎಸಿಪಿಗಳಾದ ನಾರಾಯಣ ಭರಮನಿ, ಚಂದ್ರಪ್ಪ ಮತ್ತು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.