ADVERTISEMENT

ಭತ್ತಕ್ಕೆ ಬೆಂಬಿಡದ ಬಳ್ಳಾರಿ ನಾಲೆ ‘ಭೂತ’

1,200 ಎಕರೆ ಜವುಗು, ಎರಡು ಬಾರಿ ಬಿತ್ತಿದರೂ ನಾಶವಾದ ಬೆಳೆ, ಹಿಂಗಾರಿಗೂ ಸಿಗುವುದಿಲ್ಲ ಪರಿಹಾರ

ಸಂತೋಷ ಈ.ಚಿನಗುಡಿ
Published 8 ಸೆಪ್ಟೆಂಬರ್ 2025, 1:47 IST
Last Updated 8 ಸೆಪ್ಟೆಂಬರ್ 2025, 1:47 IST
ಬೆಳಗಾವಿ ಹೊರವಲಯದ ಭತ್ತದ ಗದ್ದೆಯಲ್ಲಿ ನೀರು ಕಟ್ಟಿಕೊಂಡಿದ್ದರಿಂದ ಅಪಾರ ಪ್ರಮಾಣದ ಪಾಚಿ ಬೆಳೆದಿದೆ
ಬೆಳಗಾವಿ ಹೊರವಲಯದ ಭತ್ತದ ಗದ್ದೆಯಲ್ಲಿ ನೀರು ಕಟ್ಟಿಕೊಂಡಿದ್ದರಿಂದ ಅಪಾರ ಪ್ರಮಾಣದ ಪಾಚಿ ಬೆಳೆದಿದೆ   

ಬೆಳಗಾವಿ: ಬೆಳಗಾವಿ ನಗರ ಹಾಗೂ ತಾಲ್ಲೂಕಿನಲ್ಲಿ ನಿರಂತರವಾಗಿ ಬೀಳುತ್ತಿದ್ದ ಮಳೆ ಈಗ ಬಿಡುವು ನೀಡಿದೆ. ಆಗೊಮ್ಮೆ ಈಗೊಮ್ಮೆ ಸೂರ್ಯರಶ್ಮಿಗಳು ನೆಲ ಸ್ಪರ್ಶ ಮಾಡುತ್ತಿವೆ. ಆದರೆ, ಇಷ್ಟು ದಿನ ಸುರಿದ ಅತಿವೃಷ್ಟಿಯ ಕಾರಣ ಭತ್ತ, ಗೋಧಿ, ಚನ್ನಂಗಿ, ಕಡಲೆ, ಸಾಸಿವೆ, ಸವತೆಕಾಯಿ ಮತ್ತಿತರ ತೋಟಗಾರಿಕೆ ಬೆಳೆಗಳು ಕೊಳೆಯುವ ಹಂತ ತಲುಪಿವೆ. 1,200 ಎಕರೆ ಜಮೀನು ಜವುಗು ಹಿಡಿದಿದೆ. ನಿರಂತರ ಜವುಗು ಹೆಚ್ಚಾಗಿ ಪಾಚಿಗಟ್ಟಿದೆ. ಇದರಿಂದ ರೈತರು ಗದ್ದೆಗಳನ್ನು ಇದ್ದ ಸ್ಥಿತಿಯಲ್ಲೇ ಬಿಟ್ಟು, ಕಟ್ಟಡ ಕೆಲಸ ಮಾಡಲು ಹೊರಟಿದ್ದಾರೆ.

ಇಷ್ಟೆಲ್ಲ ಅವಘಡಗಳಿಗೆ ಕಾರಣವಾಗಿರುವುದು ಬಳ್ಳಾರಿ ನಾಲೆ ಎಂಬ ನೀರನೆಲೆ. ದಶಕಗಳ ಹಿಂದೆ 30 ಅಡಿಯಷ್ಟು ಅಗಲವಾಗಿದ್ದ ಈ ನಾಲೆ ಈಗ ಅತಿಕ್ರಮಣಕ್ಕೆ ಒಳಗಾಗಿದೆ. ನಗರದ ದ್ರವತ್ಯಾಜ್ಯ, ಘನತ್ಯಾಜ್ಯ ಹಾಗೂ ಅಪಾರ ಪ್ರಮಾಣದ ಹೂಳು ತುಂಬಿದ್ದರಿಂದ ನೀರು ಮುಂದೆ ಹರಿದು ಹೋಗದಂತಾಗಿದೆ. ಪ್ರತಿ ಮಳೆಗಾಲದಲ್ಲೂ ತಿಂಗಳುಗಟ್ಟಲೇ ನೀರು ಭತ್ತದ ಗದ್ದೆಗಳನ್ನು ಕೆರೆಗಳಂತೆ ಬದಲಾಯಿಸುತ್ತದೆ. ಈ ಸಂಕಷ್ಟಕ್ಕೆ ಎರಡು ದಶಕ ಕಳೆದರೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಹಾಳಾಯಿತು ಎರಡನೇ ಬೆಳೆ: ಜೂನ್‌ ಆರಂಭದಲ್ಲೇ ಸುರಿದ ಮಳೆಯಿಂದಾಗಿ ರೈತರು ಹರ್ಷಗೊಂಡು ಭತ್ತ ಬೆಳೆದರು. ಜುಲೈ ಮೊದಲ ವಾರದಲ್ಲಿ ವಿಪರೀತ ಮಳೆಯಿಂದಾಗಿ ಆ ಬೆಳೆ ಸಂಪೂರ್ಣ ನಾಶವಾಯಿತು. ಕೃಷಿ ಅಧಿಕಾರಿಗಳ ಸಲಹೆಯಂತೆ ಹೊಲ ಹದ ಮಾಡಿ ಮತ್ತೆ ಬಿತ್ತನೆ ಮಾಡಿದರು. ಆದರೆ ಆಗಸ್ಟ್‌ ಎರಡನೇ ಹಾಗೂ ಕೊನೆಯ ವಾರದಲ್ಲಿ ಧಾರಾಕಾರ ಮಳೆ ಮತ್ತೆ ಸುರಿಯಿತು. ಇದರಿಂದ ಎರಡನೇ ಬಾರಿ ಮಾಡಿದ ಪ್ರಯತ್ನವೂ ಮಳೆ ನೀರಲ್ಲಿ ಹೋಮ ಮಾಡಿದಂತಾಯಿತು.

ADVERTISEMENT

ಈಗ ಮೂರನೇ ಬಾರಿಗೆ ಬಿತ್ತನೆ ಮಾಡಲು ಅವಕಾಶವೇ ಇಲ್ಲದಾಗಿದೆ. ಮಾತ್ರವಲ್ಲ; ಈ ಬೆಳೆ ಹಾಳಾದರೂ ಹಿಂಗಾರಿನಲ್ಲಿ ಬೇರೆ ಏನಾದರೂ ಬೆಳೆದು ಕೈಮೇಲಿನ ಸಾಲ ತೀರಿಸಿಕೊಳ್ಳಲು ಅವಕಾಶ ಸಿಗುತ್ತಿತ್ತು. ಆದರೆ, ಸದ್ಯ ಜವುಗು ಹಿಡಿದ ಭೂಮಿಯಿಂದಾಗಿ ಹಿಂಗಾರಿನಲ್ಲೂ ಏನನ್ನೂ ಬೆಳೆಯಲು ಸಾಧ್ಯವಾಗದ ಸ್ಥಿತಿ ಬಂದೊದಗಿದೆ.

ಕೊಟ್ಟ ಮಾತಿಗೆ ತಪ್ಪಿದ ಸರ್ಕಾರ: 2013ರಲ್ಲಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಈ ನಾಲೆ ಹೂಳೆತ್ತಲು ಮನಸ್ಸು ಮಾಡಿದ್ದರು. ರಾಜ್ಯ ಸರ್ಕಾರದಿಂದ ₹800 ಕೋಟಿ ಬಿಡುಗಡೆ ಮಾಡಿಸುತ್ತೇನೆ. ಯೋಜನೆ ರೂಪಿಸಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಇದೂವರೆಗೆ ಬಿಡಿಗಾಸೂ ಇದಕ್ಕೆ ಮಂಜೂರಾಗಿಲ್ಲ.

ಈ ಭಾಗದ ಶಾಸಕರು ಪದೇಪದೇ ಬಂದು ನಾಶವಾದ ಬೆಳೆ ವೀಕ್ಷಣೆ ಮಾಡಿ ಹೋಗುತ್ತಾರೆ. ಬೇರೇನೂ ಮಾಡಲು ಸಿದ್ಧರಿಲ್ಲ. ಅಲ್ಲದೇ, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಂಗಳ ಹಿಂದೆ ಬಂದು ನಾಲಾ ಪರಿಶೀಲನೆ ಮಾಡಿ, ಬೆಳೆ ವೀಕ್ಷಣೆ ಮಾಡಿ, ರೈತರಿಂದ ಸನ್ಮಾನ ಮಾಡಿಸಿಕೊಂಡು ಹೋದರು. ಆದರೆ, ರೈತರಿಗೆ ಯಾವೊಂದು ಭರವಸೆಯನ್ನೂ ನೀಡಿಲ್ಲ ಎಂಬುದು ಅವರ ನೋವು.

ಬೆಳಗಾವಿ ಹೊರವಲಯದ ಭತ್ತದ ಗದ್ದೆಯಲ್ಲಿ ಪಾಚಿ ಬೆಳೆದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರು

ರೈತರು ಏನಂತಾರೆ?

ಬಳ್ಳಾರಿ ನಾಲೆ ಹೂಳು ತೆಗೆದರೆ ನೀರು ಸರಾಗವಾಗಿ ಹರಿಯುತ್ತದೆ. ನಮಗೆ ನಷ್ಟದ ಪರಿಹಾರ ಬೇಕಿಲ್ಲ. ಹೂಳು ತೆಗೆಯುವುದು ಬೇಕಿದೆ. ಪರಿಹಾರ ಕೊಟ್ಟು ಮೊಸಳೆ ಕಣ್ಣೀರು ಸುರಿಸಿದರೆ ಪ್ರಯೋಜನವಿಲ್ಲ
–ರಾಜು ಮರವೆ ರೈತ ಮುಖಂಡ
ಬಳ್ಳಾರಿ ನಾಲೆ ಹೂಳು ತೆಗೆದರೆ ನೀರು ಸರಾಗವಾಗಿ ಹರಿಯುತ್ತದೆ. ನಮಗೆ ನಷ್ಟದ ಪರಿಹಾರ ಬೇಕಿಲ್ಲ. ಹೂಳು ತೆಗೆಯುವುದು ಬೇಕಿದೆ. ಪರಿಹಾರ ಕೊಟ್ಟು ಮೊಸಳೆ ಕಣ್ಣೀರು ಸುರಿಸಿದರೆ ಪ್ರಯೋಜನವಿಲ್ಲ
–ರಾಜು ಮರವೆ ರೈತ ಮುಖಂಡ
ಬಳ್ಳಾರಿ ನಾಲೆಯ ಸುತ್ತಲಿನ ಜಮೀನುಗಳನ್ನು ಬಂಜರು ಮಾಡುವ ಹುನ್ನಾರ ನಡೆದಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ತೋರುತ್ತಿರುವ ಅಸಡ್ಡೆ ಕಂಡರೆ ಇದು ಸಂಶಯ ಬರುತ್ತದೆ. ಇದು ಕೃಷಿ ಯೋಗ್ಯವಾಗಿಲ್ಲ ಎಂದು ಸಾಬೀತು ಮಾಡಲು ಹೊರಟಿದ್ದಾರೆ.
–ಗೋಪಾಲ ಸೋಮನಾಚೆ ರೈತ ಅನಗೋಳ
ಈ ಬಾರಿ ಎರಡು ಬಾರಿ ಬೆಳೆದಿದ್ದರಿಂದ ₹60 ಸಾವಿರ ಪ್ರತಿ ಎಕರೆಗೆ ನಷ್ಟವಾಗಿದೆ. ಆದರೆ ಜಿಲ್ಲಾಡಳಿತ ಕೊಡುವ ಪರಿಹಾರ ಬಿಡಿಗಾಸು. ಇದರಿಂದ ನಾವು ಕೃಷಿಯಿಂದ ವಿಮುಖರಾಗುವ ಸ್ಥಿತಿಗೆ ಬಂದಿದ್ದೇವೆ.
–ದೇವಿದಾಸ ಚವಾಣ ಪಾಟೀಲ ರೈತ ವಡಗಾವಿ
ಈ ಭಾಗದ ರೈತರಿಗೆ ಈ ವರ್ಷ ಬಿಡಿಗಾಸು ಕೈಗೆ ಬಂದಿಲ್ಲ. ಬದಲಾಗಿ ದೊಡ್ಡ ಮೊತ್ತದ ಸಾಲವಾಗಿದೆ. ಅದನ್ನು ತೀರಿಸಲು ನಗರದಲ್ಲಿ ಗೌಂಡಿ ಕೆಲಸಕ್ಕೆ ರಸ್ತೆ ನಿರ್ಮಾಣ ಕಾಮಗಾರಿಗೆ ಹೊರಟಿದ್ದೇವೆ.
–ಶಾಂತಾರಾಮ ಹೊಸೂರಕರ ರೈತ ಜುನೇಬೆಳಗಾವಿ

ಎಲ್ಲೆಲ್ಲಿ ಎಷ್ಟು ಬೆಳೆ ನಾಶ?

ಬೆಳಗಾವಿ ತಾಲ್ಲೂಕಿನ ಜುನೇ ಬೆಳಗಾವಿಯಲ್ಲಿ 140 ಎಕರೆ ಅನಗೋಳ 300 ಎಕರೆ ಶಹಾಪುರ 250 ಎಕರೆ ವಡಗಾವಿ 110 ಎಕರೆ ಜುನೆ 200 ಎಕರೆ ಹಲಗಾ 100 ಎಕರೆ ಅಲಾರವಾಡ ಸಾಂಬ್ರಾ ಹಿಂಡಲಗಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೂರಾರು ಎಕರೆ ಬೆಳೆ ನೀರಲ್ಲಿ ಮುಳುಗಿ ಕೊಳೆಯುತ್ತಿದೆ.

ಗುಂಟೆಗೆ ಕೇವಲ ₹38 ಪರಿಹಾರ ಬೆಳಗಾವಿಯ ಬಾಸುಮತಿ ಅಕ್ಕಿಗೆ ದೇಶದೆಲ್ಲೆಡೆ ಬೇಡಿಕೆ ಇದೆ. ಉತ್ತಮ ದರವೂ ಇದೆ. ಆದರೆ ಇದನ್ನು ಬೆಳೆಯಲು ಅವಕಾಶ ಮಾತ್ರ ಸಿಗುತ್ತಿಲ್ಲ. ಬೆಳೆ ನಾಶವಾದ ಒಂದು ಗುಂಟೆಗೆ ಕೇವಲ ₹38 ಪರಿಹಾರ ಘೋಷಣೆ ಮಾಡಿದ್ದಾರೆ. ಅಂದರೆ ಒಂದು ಎಕರೆಗೆ ₹1520 ಮಾತ್ರ ಪರಿಹಾರ ಕೊಡುತ್ತಾರೆ. ಆದರೆ ಪ್ರತಿ ಎಕರೆಗೆ ₹30 ಸಾವಿರ ನಷ್ಟವಾಗಿದೆ ಎಂಬುದು ರೈತರ ಅಂಬೋಣ.

ಆತಂಕ ತಂದ ಪಾಚಿ...

ಭತ್ತದ ಗದ್ದೆಯಲ್ಲಿ ನಿರಂತರ ನೀರು ನಿಂತ ಕಾರಣ ಅಪಾರ ಪ್ರಮಾಣದ ಪಾಚಿ ಕಟ್ಟಿದೆ. ಇದರಿಂದ ರಾಸಾಯನಿಕ ಸಿಂಪಡಿಸಿ ಗೊಬ್ಬರ ಹಾಕಿ ಭತ್ತ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಬಂದಿದೆ. ಕಾರ್ಮಿಕರು ಹೊಲದಲ್ಲಿ ಕಾಲಿಡಲೂ ಸಾಧ್ಯವಾಗುತ್ತಿಲ್ಲ. ಗದ್ದೆಯಲ್ಲಿ ಕಾಲಿಟ್ಟರೆ ಪಾಚಿಯಿಂದಾಗಿ ಚರ್ಮ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾವು ಚೇಳುಗಳ ಉಪಟಳವೂ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.