ಬೆಳಗಾವಿಯಲ್ಲಿ ಸೋಮವಾರ ನಡೆದ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ‘ನಗರದಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ಅಗತ್ಯವಿರುವ ಸಿದ್ಧತೆ ಕೈಗೊಳ್ಳುವ ವಿಚಾರವಾಗಿ, ಜಿಲ್ಲಾಡಳಿತವು ಮಹಾನಗರ ಪಾಲಿಕೆ ನಿರ್ಲಕ್ಷಿಸಿ ಶಿಷ್ಟಾಚಾರ ಉಲ್ಲಂಘಿಸಿದೆ’ ಎಂದು ಸದಸ್ಯರು ಆರೋಪಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಷತ್ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿವರ್ಷ ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ಕೈಗೊಳ್ಳುತ್ತಿತ್ತು. ಈ ಬಾರಿ ಮೇಯರ್, ಉಪಮೇಯರ್ ಹಾಗೂ ಸದಸ್ಯರನ್ನು ಯಾವುದೇ ಪೂರ್ವಭಾವಿ ಸಭೆಗೆ ಆಹ್ವಾನಿಸದೆ ಅಪಮಾನ ಮಾಡಿದೆ’ ಎಂದು ದೂರಿದರು.
ಆಡಳಿತ ಪಕ್ಷದ ಸದಸ್ಯ ರವಿ ಧೋತ್ರೆ, ‘ಗಣೇಶೋತ್ಸವದಲ್ಲಿ ಮೂಲಸೌಕರ್ಯ ಕಲ್ಪಿಸಲು ಪಾಲಿಕೆಯೇ ಹಣ ವ್ಯಯಿಸುತ್ತಿದೆ. ಆದರೆ, ಬೇರೆಯವರು ಇದರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಮೇಯರ್‌ಗೆ ತಿಳಿಸದೆ ಸಭೆಗಳಿಗೆ ಹಾಜರಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಸರ್ಕಾರಕ್ಕೆ ವರದಿ ಕಳುಹಿಸಬೇಕು’ ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ಸದಸ್ಯ ರಮೇಶ ಸೊಂಟಕ್ಕಿ, ‘ಗಣೇಶೋತ್ಸವದ ಸಿದ್ಧತೆಗೆ ಶೇ 80ರಷ್ಟು ಹಣವನ್ನು ಪಾಲಿಕೆ ಖರ್ಚು ಮಾಡುತ್ತದೆ. ಆದರೆ, ಜಿಲ್ಲಾಡಳಿತ ಅದನ್ನೇ ಬದಿಗೆ ಸರಿಸಿದ್ದು ಸರಿಯಲ್ಲ’ ಎಂದು ದೂರಿದರು.
ಜಿಲ್ಲಾಧಿಕಾರಿ ಕ್ಷಮೆಯಾಚಿಸಲಿ: ಹನುಮಂತ ಕೊಂಗಾಲಿ
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ‘ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ದಿನದಂದು ಸಾರ್ವಜನಿಕರಿಗೆ ಪಾಲಿಕೆ ವತಿಯಿಂದ ‘ಮಹಾಪ್ರಸಾದ’ ವಿತರಿಸುವುದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಏಕಪಕ್ಷೀಯವಾಗಿ ಘೋಷಿಸಿದ್ದಾರೆ. ಪಾಲಿಕೆಯಲ್ಲಿ ಯಾರ ಗಮನಕ್ಕೂ ತರದೆ ಈ ಹೇಳಿಕೆ ನೀಡಿ, ನಂತರ ಸಾಮಾಜಿಕ ಮಾಧ್ಯಮದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣವೇ ಸಾರ್ವಜನಿಕರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಸಾರ್ವಜನಿಕರು ತೆರಿಗೆ ರೂಪದಲ್ಲಿ ನೀಡಿದ ಹಣವನ್ನು ಮಹಾಪ್ರಸಾದಕ್ಕಾಗಿ ದುರುಪಯೋಗ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ಜಿಲ್ಲಾಧಿಕಾರಿ ಶಿಷ್ಟಾಚಾರ ಉಲ್ಲಂಘಿಸಿದ ಕುರಿತು ಸರ್ಕಾರ ಮತ್ತು ರಾಜ್ಯಪಾಲರ ಗಮನಕ್ಕೆ ತರಬೇಕು’ ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ‘ಸಾರ್ವಜನಿಕರ ಹಣವನ್ನು ಮಹಾಪ್ರಸಾದಕ್ಕೆ ಬಳಸುವುದು ಸರಿಯಲ್ಲ. ಈ ಮೆರವಣಿಗೆ ದಿನದಂದು ಮಹಾಪ್ರಸಾದ ವ್ಯವಸ್ಥೆ ಮಾಡಿದರೆ, ಬೇರೆ ಸಮುದಾಯದವರು ತಮ್ಮ ಕಾರ್ಯಕ್ರಮಗಳಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತಾರೆ’ ಎಂದರು.
ಆಯುಕ್ತೆ ಬಿ.ಶುಭ, ‘ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಕುರಿತು ಗಣೇಶೋತ್ಸವ ಮಂಡಳಿಗಳಿಗೆ ಮಾಹಿತಿ ನೀಡುವಂತೆ ಹೇಳಲಾಗಿತ್ತು. ಆದರೆ, ಮಹಾಪ್ರಸಾದ ವಿತರಣೆ ಘೋಷಣೆ ಬಗ್ಗೆ ನಮಗೆ ತಿಳಿದಿರಲಿಲ್ಲ. ಮುಂದಿನ ದಿನಗಳಲ್ಲಿ ಶಿಷ್ಟಾಚಾರ ಪಾಲನೆ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತೇವೆ. ಯಾವುದೇ ಸಭೆಗೆ ಹೋಗುವ ಮುನ್ನ ಮೇಯರ್ ಅವರೊಂದಿಗೆ ಮಾತುಕತೆ ನಡೆಸುತ್ತೇವೆ’ ಎಂದರು.
ಈ ವಿಷಯವಾಗಿ ವಿಸ್ತೃತವಾಗಿ ಚರ್ಚಿಸಿದ ನಂತರ, ಗಣೇಶೋತ್ಸವದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದಡಿ ಜಿಲ್ಲಾಧಿಕಾರಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲು ಮತ್ತು ರಾಜ್ಯಪಾಲರ ಬಳಿ ನಿಯೋಗ ಕೊಂಡೊಯ್ಯಲು ನಿರ್ಣಯ ಕೈಗೊಳ್ಳಲಾಯಿತು.
ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ ಇದ್ದರು.
‘ಹಲ್ಲೆ ನಡೆಸುವವರ ವಿರುದ್ಧ ಎಫ್‌ಐಆರ್ ದಾಖಲಿಸಿ’:
‘ಟೆಂಡರ್ ನಿಯಮಗಳಲ್ಲಿ ನಿಗದಿಪಡಿಸಿದ ಭೂಬಾಡಿಗೆಗಿಂತ ಎರಡು ಪಟ್ಟು ಶುಲ್ಕ ಪಾವತಿಸಲು ನಿರಾಕರಿಸಿದ ಬೀದಿಬದಿ ವ್ಯಾಪಾರಿಗಳ ಮೇಲೆ ಗುತ್ತಿಗೆದಾರರ ಸಿಬ್ಬಂದಿ ಹಲ್ಲೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು’ ಎಂದು ವಿರೋಧ ಪಕ್ಷದ ಸದಸ್ಯರಾದ ಅಜೀಮ್ ಪಟವೇಗಾರ, ಮುಜಮ್ಮಿಲ್ ಡೋಣಿ ಮತ್ತು ಶಾಹೀದ್‌ಖಾನ್ ಪಠಾಣ ದೂರಿದರು.
‘ಈ ವಿಷಯವನ್ನು ಮುಂದಿನ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು’ ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ಮಣಿಯಲಿಲ್ಲ.
ಅಂತಿಮವಾಗಿ ಚರ್ಚೆ ನಡೆಸಿದ ನಂತರ, ‘ಬೀದಿಬದಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮಂಗೇಶ ಪವಾರ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.