ಬೆಳಗಾವಿ: ನಗರದಲ್ಲಿ ಗಾಂಜಾ ಮಾರಾಟದಲ್ಲಿ ಸಕ್ರಿಯವಾಗಿದ್ದ ಜಾಲವನ್ನು ನಗರ ಸಿಇಎನ್ ಅಪರಾಧ ಠಾಣೆ ಇನ್‌ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, 9 ಆರೋಪಿಗಳನ್ನು ಬಂಧಿಸಲಾಗಿದೆ.
ಗೋಕಾಕ ತಾಲ್ಲೂಕಿನ ಮಲ್ಲಾಪುರ ಪಿ.ಜಿ ಗ್ರಾಮದ ತಾಜಿಬ್ ಮುಲ್ಲಾ, ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ನಿವಾಸಿ ಅನುರಾಜ್ ಯರನಾಳಕರ, ಹುಕ್ಕೇರಿ ತಾಲ್ಲೂಕಿನ ಕಣಗಾಲದ ಇಸ್ಮಾಯಿಲ್ ಸಯ್ಯದ್, ತಾಜಿರ್ ಬಸ್ತವಾಡೆ, ತೇಜಸ್ ವಜರೆ, ರಂಜಾನ್ ಜಮಾದಾರ, ಮಹಾರಾಷ್ಟ್ರದ ಮುಂಬೈನ ಅಬ್ದುಲ್‌ಮಜೀದ್, ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲ್ಲೂಕಿನ ಮಹಾಗಾಂವ ಗ್ರಾಮದ ಪ್ರಥಮೇಶ ಲಾಡ್, ಶಿವಕುಮಾರ ಅಸಬೆ ಬಂಧಿತರು.
ಅವರಿಂದ 50.45 ಕೆ.ಜಿ ಗಾಂಜಾ, 13 ಮೊಬೈಲ್, 2 ಕಾರು, 1 ದ್ವಿಚಕ್ರ ವಾಹನ, ಆಯುಧಗಳು ಸೇರಿದಂತೆ ₹30 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
‘ತಾಜಿಬ್ ಮುಲ್ಲಾ ಮತ್ತು ಅನುರಾಜ್ ಯರನಾಳಕರ ಎಂಬುವರನ್ನು ಜೂನ್ 29ರಂದು ಪೊಲೀಸರು ಬಂಧಿಸಿ, 5.562 ಕೆ.ಜಿ ಗಾಂಜಾ, 4 ಮೊಬೈಲ್, ಒಂದು ಬೈಕ್ ವಶಕ್ಕೆ ಪಡೆದಿದ್ದರು. ತನಿಖೆ ಸಮಯದಲ್ಲಿ ಪ್ರಮುಖ ಆರೋಪಿಯಾದ ಇಸ್ಮಾಯಿಲ್ ಸಯ್ಯದ್, ತಾಜಿರ್ ಬಸ್ತವಾಡೆ ಗಾಂಜಾದ ಪ್ರಮುಖ ಪೂರೈಕೆದಾರರು ಎಂದು ಗೊತ್ತಾಯಿತು. ನಂತರ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮುಂಬೈನಲ್ಲಿರುವ ಇಸ್ಮಾಯಿಲ್ ಸಂಬಂಧಿ ಅಬ್ದುಲ್‌ಮಜೀದ್ ಎಂಬಾತನ ಫ್ಲ್ಯಾಟ್‌ನಲ್ಲಿ ಶೋಧ ನಡೆಸಿದರು. ಅಲ್ಲಿ 2.016 ಕೆ.ಜಿ ಗಾಂಜಾ ಪತ್ತೆಹಚ್ಚಿ ಅಬ್ದುಲ್‌ಮಜೀದ್ ಬಂಧಿಸಿದರು’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಇಸ್ಮಾಯಿಲ್ ಮತ್ತು ತಾಜಿರ್ ಎಂಬುವರು, ಬಂಧಿತ ಸ್ನೇಹಿತರನ್ನು ಭೇಟಿಯಾಗಲು ಎರಡು ಕಾರುಗಳಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬರುತ್ತಿದ್ದಾರೆ ಎಂಬ ಸುಳಿವು ತನಿಖಾ ತಂಡಕ್ಕೆ ಸಿಕ್ಕಿತ್ತು. ಕೊಲ್ಹಾಪುರ ಜಿಲ್ಲೆಯ ಚಂದಗಡನಿಂದ ಬರುತ್ತಿದ್ದಾಗ ಸುಳಗಾ ಗ್ರಾಮದ ಢಾಬಾ ಬಳಿ, ಅವರಿಬ್ಬರೂ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಯಿತು. ಅವರಿಂದ 42.730 ಕೆ.ಜಿ ಗಾಂಜಾ, 2 ಡಿಜಿಟಲ್ ತೂಕದ ಮಾಪಕಗಳು, ಎರಡು ಕಾರುಗಳು, ಆಯುಧಗಳು, 10 ಮೊಬೈಲ್, ₹4,500 ನಗದು ವಶಕ್ಕೆ ಪಡೆಯಲಾಯಿತು’ ಎಂದರು.
‘ಪ್ರಾಥಮಿಕ ತನಿಖೆ ಪ್ರಕಾರ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಭಾರಿ ಪ್ರಮಾಣದ ನಗದು ವಹಿವಾಟು ನಡೆದಿರುವುದು ತಿಳಿದುಬಂದಿದೆ. ಮಧ್ಯಪ್ರದೇಶ, ಓರಿಸ್ಸಾದಿಂದ ಬೆಳಗಾವಿಗೆ ಗಾಂಜಾ ತಂದು ಮಾರಲಾಗುತ್ತಿತ್ತು ಎಂದು ಗೊತ್ತಾಗಿದೆ. ಇಸ್ಮಾಯಿಲ್ ವಿರುದ್ಧ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ, ಹುಬ್ಬಳ್ಳಿ–ಧಾರವಾಡ, ಬೆಂಗಳೂರು ಮತ್ತು ಗೋವಾದಲ್ಲಿ ಪ್ರಕರಣ ದಾಖಲಾಗಿವೆ’ ಎಂದು ತಿಳಿಸಿದರು.
‘ಗಾಂಜಾ ಮಾರಾಟಕ್ಕೆ ಸಂಬಂಧಿಸಿ, ನಗರದಲ್ಲಿ ಭೇದಿಸಿದ ದೊಡ್ಡ ಪ್ರಕರಣ ಇದಾಗಿದೆ. ಉತ್ತಮ ಕೆಲಸ ಮಾಡಿದ ಬಿ.ಆರ್.ಗಡ್ಡೇಕರ ಮತ್ತು ತಂಡದವರಿಗೆ ಬಹುಮಾನ ನೀಡಲಾಗುವುದು. ಸರ್ಕಾರದಿಂದ ನೀಡಲಾಗುವ ಪ್ರಶಂಸಾ ಪದಕಗಳಿಗೆ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.