
ಬೆಳಗಾವಿ: ಬಹು ಭಾಷೆ, ಬಹು ಸಂಸ್ಕೃತಿಗಳ ನಾಡು ಬೆಳಗಾವಿಯಲ್ಲಿ ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಭಾವೈಕ್ಯದ ಬಣ್ಣಗಳು ಚಿಮ್ಮಿದವು. ನಗರವೂ ಏರಿದಂತೆ ಜಿಲ್ಲೆಯ ಬಹುಪಾಲು ಬೀದಿಗಳಲ್ಲಿ, ವೃತ್ತಗಳಲ್ಲಿ, ಮೈದಾನಗಳಲ್ಲಿ ಬಣ್ಣದೋಕುಳಿಯದ್ದೇ ಸಡಗರ. ಬೆಳಿಗ್ಗೆ 6ರಿಂದಲೇ ಕುಣಿದು ಕುಪ್ಪಳಿಸಿದ ಯುವಕ– ಯುವತಿಯರು ಮಧ್ಯಾಹ್ನದವರೆಗೂ ಬಣ್ಣಗಳಲ್ಲಿ ಮಿಂದೆದ್ದರು.
ನಗರದಲ್ಲಂತೂ ಯಾವುದೇ ಗಲ್ಲಿ ಮತ್ತು ರಸ್ತೆಗೆ ಕಾಲಿಟ್ಟರೂ, ಸಪ್ತವರ್ಣಗಳೇ ತುಂಬಿದ್ದವು. ಕನ್ನಡ– ಮರಾಠಿಗರೆಲ್ಲ ಒಂದಾಗಿ ಪರಸ್ಪರ ಬಣ್ಣಗಳನ್ನು ಹಚ್ಚಿ, ಗಾಳಿಯಲ್ಲಿ ತೂರಿ, ನೀರಿನಲ್ಲಿ ಕಲಿಸಿ ಸುರಿದು ಖುಷಿಪಟ್ಟರು. ಸಿಳ್ಳೆ, ಕೇಕೆ ಹಾಕುತ್ತ ಬೈಕುಗಳಲ್ಲಿ ನಗರ ಸುತ್ತಿ ಖುಷಿ ಹಂಚಿದರು.
ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರದ ಮುಂದೆ ಹೋಳಿ ಹಬ್ಬದ ದಿನವಾದ ಮಂಗಳವಾರ ಉರುಳು ಸೇವೆ ಮಾಡಿದ ಯುವಜನರು
ವಿವಿಧ ಬಡಾವಣೆಗಳು ಮತ್ತು ಮುಖ್ಯರಸ್ತೆಗಳಲ್ಲಿ ಸೋಮವಾರ ರಾತ್ರಿ ಕಾಮದಹನ ಮಾಡಿ, ಮಂಗಳವಾರ ಬೆಳಿಗ್ಗೆಯೇ ಹಬ್ಬ ಶುರು ಮಾಡಿದರು. ಮಕ್ಕಳು ಗಲ್ಲಿ–ಗಲ್ಲಿ ಓಡಾಡಿ, ತಮ್ಮ ಓರೆಗೆಯವರಿಗೆ ದ್ರವರೂಪದ ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ಶಾಲಾ–ಕಾಲೇಜು ವಿದ್ಯಾರ್ಥಿಗಳು, ವಯಸ್ಕರು ಮತ್ತು ಹಿರಿಯರು ಬಣ್ಣದ ಸಂಭ್ರಮಕ್ಕೆ ಮಾರುಹೋದರು.
ಕಾಲೇಜು, ರಸ್ತೆ, ಕಾಕತಿವೇಸ್, ಕಾಂಗ್ರೆಸ್, ಡಾ.ರಾಜ್‌ಕುಮಾರ್ ರಸ್ತೆ, ಶ್ರೀಕೃಷ್ಣ ದೇವರಾಯ ಸರ್ಕಲ್ ಹಾಗೂ ಎಲ್ಲ ಅಡ್ಡರಸ್ತೆಗಳಲ್ಲಿ ಜನದಟ್ಟಣೆ ಮತ್ತು ವಾಹನದಟ್ಟಣೆ ಅಧಿಕವಾಗಿತ್ತು. ಸ್ನೇಹಿತರ ಬಳಗಗಳು, ವಿವಿಧ ಸಂಘಟನೆಗಳು, ಮಹಿಳಾ ಮಂಡಳಗಳ ಸದಸ್ಯೆಯರು ಒಂದೆಡೆ ಸೇರಿ ಹಾಡಿ, ಕುಣಿದು, ಭಜನೆ ಮಾಡಿದರು. ಮಹಿಳೆಯರು ಗಂಡುಗಚ್ಚೆ ಹಾಕಿ, ಬೈಕ್, ಸ್ಕೂಟರ್‌ಗಳನ್ನೇರಿ ಇಡೀ ನಗರ ಸುತ್ತಿ ಹೋಳಿ ಹಬ್ಬದ ಶುಭಾಶಯ ಬಿತ್ತರಿಸಿದರು.
ಕೆಲವು ಶಾಲೆ– ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳೂ ವರ್ಣಗಳಲ್ಲಿ ಮಿಂದೆದ್ದರು. ಹಲಗೆ ಬಾರಿಸುತ್ತ, ಅದರ ನಾದಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಸ್ನೇಹಿತರು, ಪರಿಚಯಸ್ಥರು ಸಿಕ್ಕರೆ ಸಾಕು; ಲಬೋ.. ಲಬೋ.. ಲಬೋ... ಎಂದು ಬಾಯಿ ಬಡಿದುಕೊಂಡರು.
ಇಲ್ಲಿನ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರದಲ್ಲಿ ಹೋಳಿಯ ದಿನ ಉರುಳು ಸೇವೆ ಮಾಡಿದರೆ ಶಾಪ ವಿಮೋಚನೆ ಆಗುತ್ತದೆ ಎಂಬುದು ನಂಬಿಕೆ. ಅದರಂತೆ ಈ ಬಾರಿ ಕೂಡ ಹಲವು ಯುವಕ– ಯುವತಿಯರು ಅಶ್ವತ್ಥಾಮ ಮಂದಿರದ ಎದುರು ಸಾವಿರಾರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಉರುಳುಸೇವೆ ಮಾಡಿ ಗಮನಸೆಳೆದರು.
ಬೆಳಗಾವಿಯ ಲೆಲೆ ಮೈದಾನದಲ್ಲಿ ಮಂಗಳವಾರ ಶಾಸಕ ಅಭಯ ಪಾಟೀಲ ಆಯೋಜಿಸಿದ್ದ ಹೋಲಿ ಮಿಲನ್ ಕಾರ್ಯಕ್ರಮದಲ್ಲಿ ಮರಾಠಿ ಲಾವಣಿ ನೃತ್ಯ ಮಾಡಿ ರಂಜಿಸಿದ ಕಲಾವಿದೆಯರು
ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ವಡಗಾವಿಯ ಲೆಲೆ ಮೈದಾನದ ಆಯೋಜಿಸಿದ್ದ ‘ಹೋಲಿ ಮಿಲನ್’ ಯುವಜನರನ್ನು ಇನ್ನಿಲ್ಲದಂತೆ ಸೆಲೆಯಿತು. ಮರಾಠಿ ಜನಪದ ಲಾವಣಿ ನೃತ್ಯ ಹಾಗೂ ಹಾಡುಗಳು ಬಣ್ಣಗಳ ಸಂಭ್ರಮಕ್ಕೆ ಸಂಗೀತದ ಮೆರಗು ನೀಡಿದವು.
ಕಿಕ್ಕಿರಿದು ಸೇರಿದ್ದ ಯುಜನರು, ಬೆಳಿಗ್ಗೆ 10ರಿಂದ ಮಧ್ಯಾಹ್ನದವರೆಗೆ ನಾಡು–ನುಡಿ ಬಿಂಬಿಸುವ, ದೇಶಭಕ್ತಿಯ ಮತ್ತು ಭಕ್ತಿಗೀತೆಗಳಿಗೆ ಹೆಜ್ಜೆಹಾಕಿದರು. ಒಂದೆಡೆ ಯುವಕರು, ಮತ್ತೊಂದೆಡೆ ಯುವತಿಯರು ಪ್ರತ್ಯೇಕವಾಗಿ ನಾನಾ– ನೀನಾ ಎಂಬಂತೆ ಕುಣಿಯುತ್ತ ಸಂಭ್ರಮದಲ್ಲಿ ತೇಲಿದರು. ಅಭಯ ಪಾಟೀಲ ಕೂಡ ಯುವಕರೊಂದಿಗೆ ಹೆಜ್ಜೆಹಾಕಿದರು.
ಅಪಾರ ಸಂಖ್ಯೆಯ ಜನ ಒಂದೆಡೆ ಸೇರಿದ್ದರಿಂದ ತಾಸುಗಳ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಮಾತ್ರವಲ್ಲ; ನಗರದ ಗಣಪತಿ ಗಲ್ಲಿ, ಪಾಂಗುಳ ಗಲ್ಲಿ, ರಿಸಾಲ್ದಾರ ಗಲ್ಲಿ, ಖಡಕ್ ಗಲ್ಲಿ, ಮಾರುತಿ ಗಲ್ಲಿ ಮುಂತಾದೆಡೆ ಪೊಲೀಸರು ವಾಹನ ಸಂಚಾರ ನಿರ್ಬಂಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.