
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9ರಿಂದ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಸಿಂಗಾರಗೊಳ್ಳುತ್ತಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು ಸಂಚರಿಸುವ ಮುಖ್ಯರಸ್ತೆಗಳ ಆವರಣ ಗೋಡೆಗಳ ಮೇಲೆ ಕಲಾವಿದರು ಆಕರ್ಷಕ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.
ಅಧಿವೇಶನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ನಗರ ಸೌಂದರ್ಯೀಕರಣಕ್ಕೆ ಮುಂದಾಗಿದೆ. ವಿವಿಧೆಡೆಯಿಂದ ಬಂದಿರುವ ಕಲಾವಿದರು ಬಿಡಿಸಿದ ಚಿತ್ರಗಳು ನಾಡಿನ ಖ್ಯಾತನಾಮ ಸಾಹಿತಿಗಳನ್ನು ಪರಿಚಯಿಸುತ್ತಿವೆ. ಗ್ರಾಮೀಣ ಕಲೆಗಳ ಮೇಲೆ ಬೆಳಕು ಚೆಲ್ಲುತ್ತಿವೆ. ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿವೆ.
₹2.50 ಲಕ್ಷ ವೆಚ್ಚದ ಬಣ್ಣ:
‘ಅಧಿವೇಶನ ವೇಳೆ ಬೆಳಗಾವಿ ನಗರ ಕಂಗೊಳಿಸಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ ಜನಸಂದಣಿ ಹೆಚ್ಚಿರುವ ಮುಖ್ಯರಸ್ತೆಗಳ ಆವರಣ ಗೋಡೆಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಇದಕ್ಕಾಗಿ ಎಂಜಿನಿಯರ್ಸ್ ಅಸೋಸಿಯೇಷನ್ ಮತ್ತು ಬಿಲ್ಡರ್ಸ್ ಅಸೋಸಿಯೇಷನ್‌ನವರು ₹2.50 ಲಕ್ಷ ವೆಚ್ಚದಲ್ಲಿ (ಸಿಎಸ್‌ಆರ್ ಅನುದಾನದಲ್ಲಿ) ಬಣ್ಣ ಕೊಡಿಸಿದ್ದಾರೆ. ವಿವಿಧೆಡೆಯ ಕಲಾ ಶಿಕ್ಷಕರು, ಕಲಾವಿದರು ಚಿತ್ರಗಳನ್ನು ಬಿಡಿಸುವಲ್ಲಿ ನಿರತವಾಗಿದ್ದಾರೆ’ ಎಂದು ಪಾಲಿಕೆ ಪರಿಸರ ಎಂಜಿನಿಯರ್ ಹನುಮಂತ ಕಲಾದಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಣಿ ಚನ್ನಮ್ಮನ ವೃತ್ತದ ಬಳಿಯೇ ಕನ್ನಡ ಸಾಹಿತ್ಯ ಭವನವಿದೆ. ಅದರ ಆವರಣ ಗೋಡೆ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಚಿತ್ರಗಳಿಂದ ಕಂಗೊಳಿಸುತ್ತಿದೆ. ಸರ್ಕಾರಿ ಪ್ರವಾಸಿ ಮಂದಿರದ ಗೋಡೆ ಮೇಲೆ ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸುವ ಚಿತ್ರ ಬಿಡಿಸಲು ಯೋಜಿಸಿದ್ದೇವೆ. ಸ್ವಾತಂತ್ರ್ಯ ಚಳವಳಿ, ಸ್ವಚ್ಛತಾ ಆಂದೋಲನ, ಗ್ರಾಮೀಣ ಸಂಸ್ಕೃತಿ ಮತ್ತು ಜೀವನಶೈಲಿ, ಪರಿಸರ ಸಂರಕ್ಷಣೆಯ ಚಿತ್ರಗಳನ್ನು ಜನರನ್ನು ಆಕರ್ಷಿಸಲಿವೆ’ ಎಂದರು.
ಅಧಿವೇಶನ ವೇಳೆ ನಗರದ ಅಂದ ಹೆಚ್ಚಿಸಬೇಕು. ಜನರನ್ನು ಆಕರ್ಷಿಸಬೇಕೆಂದು ಆವರಣ ಗೋಡೆಗಳ ಮೇಲೆ ವೈವಿಧ್ಯಮಯ ಚಿತ್ರಗಳನ್ನು ಬಿಡಿಸುತ್ತಿದ್ದೇವೆ.ಬಿ.ಶುಭ ಆಯುಕ್ತೆ, ಮಹಾನಗರ ಪಾಲಿಕೆ ಬೆಳಗಾವಿ
‘ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಸೇತುವೆಗಳ ಸೌಂದರ್ಯೀಕರಣ ಕಾಮಗಾರಿ ಸಹ ಆರಂಭಿಸಲಾಗಿದೆ. ಗೋಡೆಗಳ ಮೇಲೆ ಚಿತ್ರ ಬಿಡಿಸುವ ಕೆಲಸವನ್ನು ಡಿ.5ರೊಳಗೆ ಮುಗಿಸಲು ಪ್ರಯತ್ನಿಸುತ್ತೇವೆ. ಕಲಾವಿದರಿಗೆ ಗೌರವಧನ ನೀಡುವುದಕ್ಕಾಗಿ ಪ್ರಾಯೋಜಕರನ್ನೂ ಹುಡುಕುತ್ತಿದ್ದೇವೆ’ ಎಂದು ತಿಳಿಸಿದರು.
ಎಲ್ಲೆಲ್ಲಿ ಸೌಂದರ್ಯೀಕರಣ?
ಅಶೋಕ ವೃತ್ತ ರಾಣಿ ಚನ್ನಮ್ಮನ ವೃತ್ತ ಸಂಗೊಳ್ಳಿ ರಾಯಣ್ಣ ವೃತ್ತ ಶ್ರೀಕೃಷ್ಣದೇವರಾಯ ವೃತ್ತ ಕಾಲೇಜು ರಸ್ತೆ ಅಂಬೇಡ್ಕರ್ ರಸ್ತೆ ಕಾಂಗ್ರೆಸ್ ರಸ್ತೆ ಖಾಸಬಾಗ ಕೇಂದ್ರೀಯ ಬಸ್ ನಿಲ್ದಾಣ ಬಳಿ ಸೇರಿದಂತೆ ನಗರದ ವಿವಿಧೆಡೆಯ ಗೋಡೆಗಳ ಮೇಲೆ ಚಿತ್ರಗಳು ಅರಳುತ್ತಿವೆ. ಮುಂಜಾವಿನಿಂದ ಸಂಜೆಯವರೆಗೂ ಕಲಾವಿದರು ತಮ್ಮ ಕಾಯಕದಲ್ಲಿ ತೊಡಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.