ADVERTISEMENT

ಬೆಳಗಾವಿಯಲ್ಲಿ ಫೀಲ್ಡಿಗಿಳಿದ ಅಧಿಕಾರಿಗಳು: ರಸ್ತೆಗಿಳಿಯುತ್ತಿರುವ ಬಸ್ಸುಗಳು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 3:39 IST
Last Updated 14 ಡಿಸೆಂಬರ್ 2020, 3:39 IST
ಬೆಳಗಾವಿ ಬಸ್‌ ನಿಲ್ದಾಣ
ಬೆಳಗಾವಿ ಬಸ್‌ ನಿಲ್ದಾಣ   

ಬೆಳಗಾವಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಿಂದ ಎನ್ ಡಬ್ಲ್ಯು ಕೆ ಆರ್ ಟಿಸಿ ಬಸ್ ಗಳ ಕಾರ್ಯಾಚರಣೆ ಪುನರಾರಂಭಿಸಲು ಜಿಲ್ಲಾಡಳಿತದ ಹಿರಿಯ ‌ಅಧಿಕಾರಿಗಳೇ ಫೀಲ್ಡಿಗಿಳಿದಿದ್ದಾರೆ.

ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಸೋಮವಾರ ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಂದು ಕೆಲವು ನೌಕರರು ಕೆಲಸಕ್ಕೆ ಹಾಜರಾಗುವಂತೆ ಮಾಡಿದ್ದಾರೆ. ಬಸ್ ಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗುವುದು. ಪ್ರಯಾಣಿಕರು ಆತಂಕವಿಲ್ಲದೆ ಬಸ್ ಗಳಲ್ಲಿ ಪ್ರಯಾಣಿಸಬಹುದು ಎಂದು ಧೈರ್ಯ ತುಂಬಿದರು. ಪೊಲೀಸ್ ‌ಎಸ್ಕಾರ್ಟ್ ನಲ್ಲಿ ಬಸ್ಸೊಂದು ರಾಮದುರ್ಗ ಮಾರ್ಗದತ್ತ ಸಂಚರಿಸಿತು. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಬಸ್ ನಿಲ್ದಾಣದಲ್ಲಿ ಭಜನೆ ಮಾಡುತ್ತಾ ಹೋರಾಟ ಮುಂದುವರಿಸಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡರಾತ್ರಿ ಅಲ್ಲಿಂದ ಕಳುಹಿಸಿದ್ದಾರೆ. ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ನಿಲ್ದಾಣದ ಆವರಣದಲ್ಲಿ ಮುಷ್ಕರ ನಡೆಸಲು ಅವಕಾಶ ಕೊಡುತ್ತಿಲ್ಲ. ಹೀಗಾಗಿ ಒಂದಷ್ಟು ನೌಕರರು ಪ್ರವಾಸಿ ಮಂದಿರದ ಆವರಣದಲ್ಲಿ ಸೇರುತ್ತಿದ್ದಾರೆ. ಮುಂದಿನ ಹೋರಾಟದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ADVERTISEMENT

ಇನ್ನೊಂದೆಡೆ ಕೆಲವು ನೌಕರರು ಮುಷ್ಕರದಲ್ಲಿ ಭಾಗಿಯಾಗದೆ, ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹೀಗಾಗಿ ಡಿಪೊದಿಂದ ಬಸ್ಸುಗಳು ನಿಲ್ದಾಣದತ್ತ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.