ಅಕ್ರಮ ಮದ್ಯ ಸಾಗಣೆ: ₹5.63 ಲಕ್ಷ ಮೌಲ್ಯದ ಮದ್ಯ ವಶ
ಬೆಳಗಾವಿ: ಇಲ್ಲಿನ ರಕ್ಕಸಕೊಪ್ಪ ಜಲಾಶಯದ ಬಳಿ ಶನಿವಾರ, ಕಾರಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹5.63 ಲಕ್ಷ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ, ಗೋವಾದಿಂದ ಅಕ್ರಮವಾಗಿ ಮದ್ಯದ ಸಾಗಣೆ ನಿರಂತರ ನಡೆದಿದೆ. ಇದರ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ರಕ್ಕಸಕೊಪ್ಪ ಜಲಾಶಯದ ಬಳಿ ಕಾವಲು ನಿಂತಿದ್ದರು.
ಇದೇ ಮಾರ್ಗದಲ್ಲಿ ದಾಟುತ್ತಿದ್ದ ದುಬಾರಿ ಕಾರನ್ನು ಅನುಮಾನದಿಂದ ತಪಾಸಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಕಾರ್ ಓಡಿಸುತ್ತಿದ್ದ ಬಾದರವಾಡಿ ಗ್ರಾಮದ ಬಾಳು ಸಾತೇರಿ ಎಂಬಾತ ಪರಾರಿಯಾದ. ವಿವಿಧ 10 ಬ್ಯಾಂಡುಗಳ 50 ಮದ್ಯದ ಬಾಕ್ಸುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ ಬಳಿಕ ಕಟ್ಟೆಚ್ಚರ: ಗೋವಾದಿಂದ ಅಕ್ರಮವಾಗಿ ಮದ್ಯ ಸರಬರಾಜು ಆಗುತ್ತಿರುವ ಬಗ್ಗೆ ಆಗಸ್ಟ್ 24ರಂದು ‘ಪ್ರಜಾವಾಣಿ’ಯ ಒಳನೋಟ ಅಂಕಣದಲ್ಲಿ ತನಿಖಾ ವರದಿ ಪ್ರಕಟವಾಗಿತ್ತು. ಬಳಿಕ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ತಂಡ ಕಟ್ಟಿಕೊಂಡು ಗಡಿಯಲ್ಲಿ ತಪಾಸಣೆ ಚುರುಕುಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.