ADVERTISEMENT

ಅತ್ಯಾಚಾರ ಬೆದರಿಕೆ ಪ್ರಕರಣ ದಾಖಲಿಸಿದ ರಾಜಕುಮಾರ್ ವಿರುದ್ಧ 10 ಕೇಸು ಹಾಕಿದ ಯುವತಿ

ಅತ್ಯಾಚಾರ, ಗರ್ಭಪಾತ, ಹಲ್ಲೆ, ಅಪಹರಣ, ಖಾಸಗಿತನಕ್ಕೆ ಧಕ್ಕೆ ಸೇರಿ 10 ಕಲಂ ಅಡಿ ಕೇಸ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:11 IST
Last Updated 26 ಜುಲೈ 2022, 6:11 IST
 ರಾಜಕುಮಾರ್ ಟಾಕಳೆ
ರಾಜಕುಮಾರ್ ಟಾಕಳೆ    

ಬೆಳಗಾವಿ: ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ, ಚನ್ನಪಟ್ಟಣ ಮೂಲದ ಯುವತಿ ಸೋಮವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.

ಇಲ್ಲಿನ ಎಪಿಎಂಸಿ ಪೊಲೀಸ್‌ ಠಾಣೆಗೆ ಹಾಜರಾದ ಯುವತಿಯನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದರು.

‘ರಾಜಕುಮಾರ ನನ್ನನ್ನು ಯಾಮಾರಿಸಿ ಮದುವೆಯಾಗಿದ್ದಾರೆ. ಆದರೆ, ಈಗ ನನ್ನ ವಿರುದ್ಧವೇ ‘ಸುಳ್ಳು ಅತ್ಯಾಚಾರದ ಬೆದರಿಕೆ ಹಾಗೂ ಹಣ ಕೇಳುತ್ತಿದ್ದೇನೆ’ ಎಂದು ಜುಲೈ 18ರಂದು ದೂರು ನೀಡಿದ್ದಾರೆ. ಇದರ ವಿಚಾರಣೆಗೂ ನಾನು ಪೊಲೀಸರಿಗೆ ಸಹಕರಿಸಿದ್ದೇನೆ. ನನಗೆ ಆದ ಅನ್ಯಾಯದ ವಿರುದ್ಧವೂ ಜುಲೈ 23ರಂದು ಪ್ರತಿ ದೂರು ದಾಖಲಿಸಿದ್ದೇನೆ. ಅದರ ವಿಚಾರಣೆಗೆ ಹಾಜರಾಗಲು ಬಂದಿದ್ದೇನೆ’ ಎಂದು ಯುವತಿ ಮಾಧ್ಯಮದವರ ಮುಂದೆ ಹೇಳಿಕೊಂಡರು.

ADVERTISEMENT

10 ಕಲಂ ಅಡಿ ಪ್ರಕರಣ

ರಾಜಕುಮಾರ ಟಾಕಳೆ ವಿರುದ್ಧ ಯುವತಿ ಬರೋಬ್ಬರಿ10 ವಿವಿಧ ಕಲಂಗಳ ಅಡಿ ದೂರು ದಾಖಲಿಸಿದ್ದಾರೆ. ಅತ್ಯಾಚಾರ (ಐಪಿಸಿ ಸೆಕ್ಷಣ್‌ 376), ಅಪಹರಣ (ಐಪಿಸಿ 366), ಗರ್ಭಪಾತ ಮಾಡಿಸಿದ್ದು (312), ‌ವಂಚನೆ (420), ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ(354), ಅವಾಚ್ಯವಾಗಿ ನಿಂದಿಸುವುದು (ಐಪಿಸಿ 504), ಜೀವ ಬೆದರಿಕೆ (506), ಗೌರವಕ್ಕೆ ಧಕೆ ತರುವುದು (509) ಹಾಗೂ ಖಾಸಗಿತನಕ್ಕೆ ಧಕ್ಕೆ (ಐಟಿ ಆ್ಯಕ್ಟ್‌ 66ಇ), ಲೈಂಗಿಕ ಪ್ರಚೋದನಕಾರಿ ವಿಡಿಯೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ (ಐಟಿ ಆ್ಯಕ್ಟ್‌ 67ಎ) ಕೇಸ್‌ಗಳನ್ನು ದಾಖಲಿಸಿದ್ದಾರೆ.

ಯುವತಿಯ ಖಾಸಗಿತನ ವಿಡಿಯೊಗಳು ಕಳೆದ 15 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಆರೋಪ ಹೊತ್ತಿರುವ ರಾಜಕುಮಾರ ಟಾಕಳೆ ಅವರು, 2018ರಲ್ಲಿ ಸಚಿವರಾಗಿದ್ದ ಶ್ರಿಮಂತ ಪಾಟೀಲ ಅವರ ಆಪ್ತ ಸಹಾಯಕರಾಗಿದ್ದರು. ಆ ಸಂದರ್ಭದಲ್ಲಿ ಯುವತಿಯೊಂದಿಗೆ ಸಖ್ಯ ಬೆಳೆದಿತ್ತು ಎಂಬ ವಿಷಯಗಳನ್ನು ಪೊಲೀಸರು ತಿಳಿಸಿದ್ದಾರೆ.

‘ನನ್ನ ಮದುವೆಯಾಗಿದೆ ಎಂದು ಗೊತ್ತಿದ್ದೂ ಯುವತಿ ನನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದರು. ಈಗ ₹ 50 ಲಕ್ಷ ಹಣ ಕೊಡಬೇಕು, ಇಲ್ಲದಿದ್ದರೆ ಅತ್ಯಾಚಾರದ ಕೇಸ್‌ ಹಾಕುವುದಾಗಿ ಹೆದರಿಸುತ್ತಿದ್ದಾರೆ. ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಕ್ರಮ ಜರುಗಿಸಬೇಕು ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕು’ ಎಂದು ರಾಜಕುಮಾರ ಮುಂಚಿತವಾಗಿಯೇ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಯುವತಿ ವಿರುದ್ಧ ಐಪಿಸಿ 1860 (U/s 384, 448, 504, 506, 34) ಕಲಂ ಅಡಿ ಕೇಸ್ ದಾಖಲಿಸಿದ್ದಾರೆ.

‘ನಾನು ಎಲ್ಲ ವಿಚಾರಣೆಗೂ ಸಹಕರಿಸುತ್ತೇನೆ. ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಇಂಥವರ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇನೆ’ ಎಂದೂ ಯುವತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.