
ಬೆಳಗಾವಿ: ಎಲ್ ಆ್ಯಂಡ್ ಟಿ ಕಂಪನಿ ಕಾರ್ಯವೈಖರಿ ಖಂಡಿಸಿ, ನಗರದಲ್ಲಿನ ಎಲ್ ಆ್ಯಂಡ್ ಟಿ ಕಂಪನಿ ಕಚೇರಿಗೆ ಸ್ಥಳೀಯರು ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಾಸಕ ಅಭಯ ಪಾಟೀಲ, ‘ಬೆಳಗಾವಿಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ಆರು ವರ್ಷಗಳಿಂದ ಕಾಮಗಾರಿ ಆರಂಭಿಸಿದ್ದಾರೆ. ಆದರೆ, ಯಾವ ಕೆಲಸವೂ ನಿಗದಿತ ಅವಧಿಯಲ್ಲಿ ಮುಗಿದಿಲ್ಲ. ಕೆಲಸದಲ್ಲಿ ಗುಣಮಟ್ಟವೂ ಇಲ್ಲ. ಇದನ್ನು ಖಂಡಿಸಿ ಸಾಂಕೇತಿಕ ಹೋರಾಟ ಮಾಡಿದ್ದೇವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪ್ರತಿವಾರ ಒಂದೊಂದು ವಾರ್ಡ್‌ನವರು ಬಂದು ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
‘ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಮುಚ್ಚಿಲ್ಲ. ಕೆಲವೆಡೆ ಕಾಮಗಾರಿ ಮುಗಿದು ಎರಡು ವರ್ಷವಾದರೂ, ದುರಸ್ತಿ ಮಾಡಿಲ್ಲ. ಈ ಬಗ್ಗೆ ಕಂಪನಿ ಅಧಿಕಾರಿಗಳೊಂದಿಗೆ ಹತ್ತು ಸಲ ಸಭೆ ಮಾಡಿದ್ದೇವೆ. ಚೆನ್ನೈನಲ್ಲಿನ ಅಧಿಕಾರಿಗಳನ್ನು ಕರೆಯಿಸಿ, ಬೆಂಗಳೂರಿನಲ್ಲೂ ಸಭೆ ಮಾಡಿದ್ದೇವೆ. ಇನ್ಮುಂದೆ ಕಾಮಗಾರಿಗಾಗಿ ಅಗೆದ ಗುಂಡಿಯಲ್ಲಿ ಬಿದ್ದು ಯಾರಾದರೂ ಮೃತಪಟ್ಟರೆ, ಕಂಪನಿ ಮಖ್ಯಸ್ಥರ ವಿರುದ್ಧವೇ ದೂರು ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು.
ಪಾಲಿಕೆ ಸದಸ್ಯರಾದ ಜಯಂತ ಜಾಧವ, ಆನಂದ ಚವ್ಹಾಣ ಇತರರಿದ್ದರು.
‘ಎಲ್ಲ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಮುಂದೆ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಅಧಿಕಾರಿಗಳು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.