ADVERTISEMENT

ಬೆಳಗಾವಿ ಮಾರುಕಟ್ಟೆಗೆ ‘ರಂಜಾನ್‌’ ಕಳೆ

ಒಣಹಣ್ಣು, ಖರ್ಜೂರಕ್ಕೆ ಹೆಚ್ಚಿನ ಬೇಡಿಕೆ- ವಿದ್ಯುದ್ದೀಪಗಳಿಂದ ಝಗಮಗಿಸುತ್ತಿರುವ ರಸ್ತೆಗಳು

ಇಮಾಮ್‌ಹುಸೇನ್‌ ಗೂಡುನವರ
Published 4 ಏಪ್ರಿಲ್ 2024, 5:33 IST
Last Updated 4 ಏಪ್ರಿಲ್ 2024, 5:33 IST
ರಂಜಾನ್‌ ಮಾಸದ ಅಂಗವಾಗಿ ಬೆಳಗಾವಿಯ ಮಾರುಕಟ್ಟೆ ಪ್ರದೇಶ ವಿದ್ಯುದ್ದೀಪಗಳಿಂದ ಝಗಮಗಿಸುತ್ತಿದೆ –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ರಂಜಾನ್‌ ಮಾಸದ ಅಂಗವಾಗಿ ಬೆಳಗಾವಿಯ ಮಾರುಕಟ್ಟೆ ಪ್ರದೇಶ ವಿದ್ಯುದ್ದೀಪಗಳಿಂದ ಝಗಮಗಿಸುತ್ತಿದೆ –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ‌ವಿದ್ಯುದ್ದೀಪಗಳಿಂದ ಝಗಮಗಿಸುತ್ತಿರುವ ರಸ್ತೆಗಳು. ಸುವಾಸನೆ ಬೀರುತ್ತಿರುವ ಬಗೆಬಗೆಯ ಸುಗಂಧದ್ರವ್ಯಗಳು (ಅತ್ತರ್‌). ಬಾಯಲ್ಲಿ ನೀರೂರಿಸುತ್ತಿರುವವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು. ರಾತ್ರಿಯಿಡೀ ನಡೆಯುತ್ತಿರುವ ವ್ಯಾಪಾರ–ವಹಿವಾಟು, ಎತ್ತ ನೋಡಿದರೂ ಸಂಭ್ರಮವೋ ಸಂಭ್ರಮ.

ಇವೆಲ್ಲ ದೃಶ್ಯಗಳು ಕಂಡುಬಂದಿದ್ದು ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ.

‘ರಂಜಾನ್‌’ ಮಾಸದ ಅಂಗವಾಗಿ ಬೆಳಗಾವಿ ಮಾರುಕಟ್ಟೆ ಕಳೆಗಟ್ಟಿದ್ದು, ಖರೀದಿ ಭರಾಟೆ ಜೋರಾಗಿದೆ. ದರ್ಬಾರ್‌ ಗಲ್ಲಿ, ಖಂಜರ್‌ ಗಲ್ಲಿ, ಖಡೇಬಜಾರ್‌ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ADVERTISEMENT

ಹಗಲಿಡೀ ರೋಜಾ (ಉಪವಾಸ ವ್ರತ) ಕೈಗೊಳ್ಳುವ ಮುಸ್ಲಿಮರು, ‘ಇಫ್ತಾರ್‌’ ನಂತರ ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಹಿಂದೂಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮಿಷ್ಟದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಬೆಳಗಾವಿ ಮಾತ್ರವಲ್ಲದೆ; ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಖರೀದಿಗೆ ಜನ ಬರುತ್ತಿದ್ದಾರೆ. ಸಂಜೆ 7ರ ನಂತರ ಚುರುಕು ಪಡೆಯುತ್ತಿರುವ ವಹಿವಾಟು ನಸುಕಿನ ಜಾವದವರೆಗೂ ನಡೆಯುತ್ತಿದೆ.

ಒಣಹಣ್ಣು, ಖರ್ಜೂರಕ್ಕೆ ಬೇಡಿಕೆ: ಮುಸ್ಲಿಮರ ಪವಿತ್ರ ಹಬ್ಬ ‘ಈದ್‌–ಉಲ್‌–ಫಿತ್ರ್‌’ ಆಚರಣೆಗೆ ಒಂದು ವಾರವಷ್ಟೇ ಬಾಕಿ ಇದೆ. ಹಬ್ಬದ ದಿನ ಮನೆಯಲ್ಲಿ ‘ಶಿರ್‌–ಕುರ್ಮಾ’ ತಯಾರಿಸಲು ಮುಸ್ಲಿಮರು, ಒಣಹಣ್ಣು ಮತ್ತು ಶಾವಿಗೆಯನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಖರ್ಜೂರಕ್ಕೂ ಹೆಚ್ಚಿನ ಬೇಡಿಕೆಯಿದೆ.

‘ಮುಸ್ಲಿಮರು ರೋಜಾ ಮುಕ್ತಾಯಗೊಳಿಸುವಾಗ, ಖರ್ಜೂರವನ್ನು ಆದ್ಯತೆ ಮೇಲೆ ಸೇವಿಸುತ್ತಾರೆ. ಉಳಿದ ಸಮುದಾಯಗಳ ಜನರಿಂದಲೂ ಬೇಡಿಕೆ ಇರುವ ಕಾರಣ, ಭಾರತ ಮಾತ್ರವಲ್ಲದೆ; ವಿದೇಶದಿಂದಲೂ ಖರ್ಜೂರ ತರಿಸಿದ್ದೇವೆ. ಕಲ್ಮಿ, ಖಿಮಿಯಾ, ಅಜ್ಮಾ, ಫರಾದ್‌ ಮತ್ತಿತರ ಕಂಪನಿಗಳ ಖರ್ಜೂರ ಹೆಚ್ಚಾಗಿ ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇ 10ರಷ್ಟು ದರ ಹೆಚ್ಚಾಗಿದೆ. ಖರ್ಜೂರ ದರ ಪ್ರತಿ ಕೆ.ಜಿ.ಗೆ ₹160ರಿಂದ ₹1,400ರವರೆಗೆ ಇದೆ’ ಎಂದು ದರ್ಬಾರ್‌ ಗಲ್ಲಿಯ  ವ್ಯಾಪಾರಿ ಮಹಮ್ಮದ್‌ಸುಫಿಯಾನ್‌ ಸಂಗೊಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿರ್‌ಕುರ್ಮಾ ತಯಾರಿಕೆಗೆ ಬಳಸುವ ಶಾವಿಗೆ ದರ ಕೆ.ಜಿಗೆ ₹120 ಇದೆ. ನಾವು ಮನೆಯಲ್ಲೇ ತಯಾರಿಸುವ ‘ಮಿಲ್ಕ್‌ರೋಜ್‌’ ಶಾವಿಗೆ ದರ 450 ಗ್ರಾಂ.ಗೆ ₹50 ಇದೆ. 100 ಗ್ರಾಂ ಪಿಸ್ತಾಗೆ ₹200, ಚಾರೋಲಿಗೆ ₹280, ಕಲ್ಲಂಗಡಿ ಬೀಜಕ್ಕೆ ₹80, ಅಕ್ರೋಟ್‌ಗೆ ₹160 ದರವಿದೆ’ ಎಂದರು.

ಬಟ್ಟೆ ಮಾರಾಟ ಜೋರು: ಖಡೇಬಜಾರ್‌, ಬೆಂಢಿ ಬಜಾರ್‌, ಗಣಪತ ಗಲ್ಲಿಯಲ್ಲಿರುವ ಅಂಗಡಿಗಳಲ್ಲಿ ಬಟ್ಟೆಗಳ ಮಾರಾಟವೂ ಜೋರಾಗಿದೆ. ವೈವಿಧ್ಯಮಯ ಸೀರೆಗಳು, ಬಟ್ಟೆಗಳು ಮಹಿಳೆಯರನ್ನು ಸೆಳೆಯುತ್ತಿವೆ. ಮಕ್ಕಳು, ಯುವಕ–ಯುವತಿಯರ ‘ಸಿದ್ಧ ಉಡುಪು’ಗಳು ಹೆಚ್ಚಾಗಿ ಬಿಕರಿಯಾಗುತ್ತಿವೆ. ಆಕರ್ಷಕ ಜುಬ್ಬಾ, ಕುರ್ತಾ–ಪೈಜಾಮ್‌ ಖರೀದಿಸುವವರಿಗೂ ‘ಬರ’ವಿಲ್ಲ.

ಇಫ್ತಾರ್‌ ಕೂಟಗಳು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಮಸೀದಿಗಳಲ್ಲಿ ನಿತ್ಯ ಸಂಜೆ ‘ಇಫ್ತಾರ್‌ ಕೂಟ’ಗಳು ನಡೆಯುತ್ತಿವೆ. ಕೆಲವೆಡೆ ಆಯಾ ಊರಿನ ಸಭಾಂಗಣಗಳು, ಪ್ರಮುಖ ಸ್ಥಳಗಳಲ್ಲಿ ಹಿಂದೂಗಳೇ ಇಂಥ ಕೂಟಗಳನ್ನು ಏರ್ಪಡಿಸಿ, ಭಾವೈಕ್ಯ ಮೆರೆಯುತ್ತಿದ್ದಾರೆ.

ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಮಾಂಸಾಹಾರಿ ಖಾದ್ಯಗಳ ಮಾರಾಟ ಜೋರಾಗಿದೆ

ಮಾಂಸಾಹಾರಿ ಖಾದ್ಯಗಳು

ದರ್ಬಾರ್‌ ಗಲ್ಲಿಗೆ ಕಾಲಿಟ್ಟರೆ ಸಾಕು; ನಾನಾ ಬಗೆಯ ಮಾಂಸಾಹಾರಿ ಖಾದ್ಯಗಳು ಗ್ರಾಹಕರನ್ನು ಸೆಳೆಯುತ್ತವೆ. ಮಟನ್‌ ಬಿರಿಯಾನಿ ಚಿಕನ್‌ ಬಿರಿಯಾನಿ ಮಟನ್‌ ಕಬಾಬ್‌ ಚಿಕನ್‌ ರೋಲ್‌ ಚಿಕನ್‌ ತಂದೂರಿ ಸಮೋಸಾ ಹೀಗೆ... ಹಲವಾರು ಖಾದ್ಯಗಳನ್ನು ಜನರು ಸವಿಯುತ್ತಿರುವುದು ಕಂಡುಬರುತ್ತಿದೆ. ಅಲ್ಲಲ್ಲಿ ಸಸ್ಯಾಹಾರಿ ಖಾದ್ಯಗಳೂ ಸಿಗುತ್ತಿವೆ. ಇದಲ್ಲದೆ ಸಿಹಿತಿನಿಸುಗಳಾದ ಫಿರನಿ ಫುಡ್ಡಿಂಗ್‌ ಐಸ್‌ಕ್ರೀಮ್‌ ವಿವಿಧ ಹಣ್ಣಿನ ರಸವನ್ನು ಜನರು ಸೇವಿಸಿ ಖುಷಿಪಡುತ್ತಿದ್ದಾರೆ.

ಆಲ್ಕೋಹಾಲ್‌ರಹಿತ ‘ಅತ್ತರ್‌’
‘ನಮ್ಮಲ್ಲಿ ಆಲ್ಕೋಹಾಲ್‌ ರಹಿತವಾಗಿರುವ 1500 ಮಾದರಿಯ ಅತ್ತರ್‌ಗಳಿವೆ. ಅವುಗಳ ದರ ಪ್ರತಿ ಬಾಟಲಿಗೆ ₹40ರಿಂದ 1500ರವರೆಗೆ ಇದೆ. ಅಜ್ಮಲ್ ರಸಾಸಿ ಅಫ್ಘಾನ್‌ ಕಂಪನಿಗಳ ಅತ್ತರ್‌ ಹೆಚ್ಚಾಗಿ ಮಾರಾಟವಾಗುತ್ತಿವೆ’ ಎಂದು ಬೆಂಢಿ ಬಜಾರ್‌ ಕಾರ್ನರ್‌ನ ವ್ಯಾಪಾರಿ ಅಶ್ಫಾಕ್‌ ನಾಲಬಂದ್‌ ತಿಳಿಸಿದರು. ‘ರಂಜಾನ್‌ ಮಾಸದಲ್ಲಿ ಮುಸ್ಲಿಮರು ಪವಿತ್ರ ಗ್ರಂಥವಾದ ‘ಕುರಾನ್‌’ ಅನ್ನು ಪ್ರತಿದಿನ ಪಠಿಸಿ ಇಸ್ಲಾಂ ಧರ್ಮದ ಧಾರ್ಮಿಕ ಆಚರಣೆಗಳನ್ನು ಅರಿಯುತ್ತಾರೆ. ಇದೊಂದೇ ತಿಂಗಳಲ್ಲಿ ನಮ್ಮ ಮಳಿಗೆಯಲ್ಲಿ 1000ರಿಂದ 1200 ‘ಕುರಾನ್‌’ ಗ್ರಂಥಗಳು ಮಾರಾಟವಾಗಿವೆ. ಅಫ್ಘಾನಿ ಇಂಡಿಯನ್‌ ಕಾಶ್ಮೀರಿ ಸುರ್ಮಾ ಟೋಪಿಗಳಿಗೂ ಹೆಚ್ಚಿನ ಬೇಡಿಕೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.