ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು
ಬೆಳಗಾವಿ: ಬೆಳಗಾವಿ ಮೇಯರ್, ಉಪ ಮೇಯರ್ ಅಯ್ಕೆಗೆ ಕಸರತ್ತು ನಡೆದಿದ್ದು, ಬಿಜೆಪಿ ಕೋರ್ ಕಮಿಟಿಯಲ್ಲಿ ಚುನಾವಣೆ ಪೂರ್ವದ ತಯಾರಿಗಳು ಭರದಿಂದ ಸಾಗಿವೆ.
ಚುನಾವಣಾ ವೀಕ್ಷಕ ಎನ್.ರವಿಕುಮಾರ್, ಶಾಸಕ ಅಭಯ ಪಾಟೀಲ, ಸಂಸದ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕೋರ್ ಕಮಿಟಿ ಸದಸ್ಯರು ಗೋಪ್ಯ ಚರ್ಚೆ ನಡೆಸಿದರು.
ಮೇಯರ್ ಸ್ಥಾನಕ್ಕೆ ಮಂಗೇಶ ಪವಾರ, ಉಪ ಮೇಯರ್ ಸ್ಥಾನಕ್ಕೆ ವಾಣಿ ವಿಲಾಸ ಜೋಶಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಕುರಿತೂ ಬಿರುಸಿನ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಮೇಯರ್ ಸ್ಥಾನಕ್ಕೆ ಐವರು, ಉಪ ಮೇಯರ್ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ಇದೆ. ನಾಯಕರು ಒಬ್ಬೊಬ್ಬರನ್ನೇ ಕರೆದು ಸಂಧಾನ ಮಾಡಿಸಲು ಯತ್ನಿಸಿದರು.
65 ಸದಸ್ಯರಿಗೆ ಮತದಾನ ಹಕ್ಕು:
ಬೆಳಗಾವಿ ಪಾಲಿಕೆಯಲ್ಲಿ 58 ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿಯ 35 ಸದಸ್ಯರಿದ್ದಾರೆ. ಪಕ್ಷೇತರರಾಗಿ ಗೆದ್ದಿದ್ದ ಇಬ್ಬರು ಸದಸ್ಯರು ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ 10, ಎಐಎಂಐಎಂನ ಒಬ್ಬ ಸದಸ್ಯರಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತರು ಸೇರಿದಂತೆ 10 ಸದಸ್ಯರು ಪಕ್ಷೇತರರಿದ್ದಾರೆ. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಆಸಿಫ್ ಸೇಠ್, ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಸಂಸದರಾದ ಜಗದೀಶ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ ಅವರಿಗೂ ಮತದಾನದ ಹಕ್ಕು ಇದೆ.
ಬೆಳಗಾವಿಯಲ್ಲಿ ಶನಿವಾರ ಮೇಯರ್, ಯಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ, ಸಂಸದ ಜಗದೀಶ ಶೆಟ್ಟರ್, ವಿಧಾನ ಪರಿಣಾಮ ಸದಸ್ಯ, ಚುನಾವಣಾ ವೀಕ್ಷಕ ಎನ್.ರವಿಕುಮಾರ್ ಕೋರ್ ಕಮಿಟಿ ಸಭೆ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.