
ಬೆಳಗಾವಿಯಲ್ಲಿ ಸೋಮವಾರ ನಡೆದ ಪಾಲಿಕೆ ಪರಿಷತ್ ಸಭೆಯಲ್ಲಿನ ನಡಾವಳಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ, ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದರು ಪ್ರಜಾವಾಣಿ ಚಿತ್ರ
ಬೆಳಗಾವಿ: ಮಹಾನಗರ ಪಾಲಿಕೆಯ ಆಸ್ತಿ ನೋಂದಣಿ, ದಂಡ ವಸೂಲಿ ಹಾಗೂ ತೆರಿಗೆಯಲ್ಲಿ ‘ನಮ್ಮವರೇ’ ಏಜೆಂಟರಾಗಿದ್ದಾರೆ. ಇದು ಕೂಡ ದೊಡ್ಡ ತಲೆನೋವು ಎಂದು ಮೇಯರ್ ಮಂಗೇಶ ಪವಾರ ಅವರೇ ಪಾಲಿಕೆ ಪರಿಷತ್ ಸಭೆಯಲ್ಲೇ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಪರಿಷತ್ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ದಿನೇಶ ನಾಶಿಪುಡಿ ಅವರು ಆಸ್ತಿಗಳ ಮೇಲಿನ ತೆರಿಗೆ, ನಿಯಮ ಮೀರಿದವರಿಂದ ಎರಡುಪಟ್ಟು ತೆರಿಗೆ ವಸೂಲಿ ಕುರಿತಾಗಿ ಪ‍್ರಶ್ನೆ ಎತ್ತಿದರು. ಅವರ ಮಾತಿಗೆ ಸಹಮತಗೊಂಡ ಮೇಯರ್, ‘ಏನ್ ಮಾಡೋದರಿ, ನಮ್ಮವರೇ ಕೆಲವರು ಏಜೆಂಟರಾಗಿದ್ದಾರೆ’ ಎಂದರು.
‘ನಿಯಮ ಮೀರಿ ಕಟ್ಟಡ ನಿರ್ಮಿಸಿದವರಿಗೆ ಅಥವಾ ಒತ್ತುವರಿ ಮಾಡಿಕೊಂಡವರಿಂದ ಎರಡುಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ದಂಡವನ್ನೂ ಕಟ್ಟಲಾಗುತ್ತಿದೆ. ಅದಾಗಿಯೂ ಅವರಿಗೆ ‘ಕ್ಲಿಯರನ್ಸ್’ ಕೊಡುವುದಿಲ್ಲ. ಇದರಿಂದ ಜನರಿಗೆ ಏನು ಪ್ರಯೋಜನವಾಯಿತು’ ಎಂದು ದಿನೇಶ ಪ್ರಶ್ನೆ ಎತ್ತಿದರು.
ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ‘ಕಟ್ಟಡ ಶೇ 15ರಷ್ಟು ನಿಯಮ ಮೀರಿದ್ದರೆ ಮಾತ್ರ ತಿದ್ದಿಕೊಳ್ಳಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿದ್ದರೆ ಮೊದಲ ವರ್ಷಕ್ಕೆ ಡಬಲ್ ತೆರಿಗೆ ವಿಧಿಸುವುದು ನಿಯಮದಲ್ಲಿದೆ. ಇದನ್ನು ಸರ್ಕಾರ ಕಾನೂನು ಮಾಡಿಲ್ಲ. ಆದರೆ, ಮಹಾನಗರ ಪಾಲಿಕೆಯಲ್ಲೇ ಗೊತ್ತುವಳಿ ಮಂಡಿಸಿದ್ದರಿಂದ ಈ ರೀತಿ ವಸೂಲಿ ಮಾಡಲಾಗುತ್ತಿದೆ’ ಎಂದರು.
‘ಹಾಗಿದ್ದರೆ ಇದನ್ನು ಕಾನೂನುಬದ್ಧ ಮಾಡಿರಿ. ಮಧ್ಯವರ್ತಿಗಳು ಕೈ ಹಾಕಿ ದಂಡದ ಮೊತ್ತದಲ್ಲೂ ರಿಯಾಯಿತಿ ಕೊಡಿಸುತ್ತಿದ್ದಾರೆ. ಅನಧಿಕೃತ ಕಟ್ಟಡ ಕಟ್ಟಿದವರಿಗೆ ವಿದ್ಯುತ್ ಮೀಟರ್, ನಲ್ಲಿ ಸಂಪರ್ಕಗಳೂ ಸಿಗಬಾರದು. ಅವು ಹೇಗೆ ಸಿಗುತ್ತವೆ?’ ಎಂದು ದಿನೇಶ ಮರು ಪ್ರಶ್ನೆ ಮಾಡಿದರು.
ಆಗ ಮಧ್ಯ ಪ್ರವೇಶಿಸಿದ ಮೇಯರ್, ‘ನಮ್ಮವರೇ ಏಜೆಂಟರಾಗಿದ್ದು ಕೂಡ ಇದಕ್ಕೆ ಕಾರಣ. ಇನ್ನು ಮುಂದೆ ಅದನ್ನು ನಿಯಮಬದ್ಧವಾಗಿ ಮಾಡಲಾಗವುದು’ ಎಂದರು.
‘ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹೆಸ್ಕಾಂನಿಂದ ವಿದ್ಯುತ್ ಬಿಲ್ ಹಾಗೂ ನೀರಿನ ಬಿಲ್ ಪಾವತಿಸಲಾಗುತ್ತಿದೆ. ಆದರೆ, ಅದೇ ಮಂಡಳಿಗೆ ಪಾಲಿಕೆಯಿಂದಲೂ ನೀರಿನ ಕರ ಕಟ್ಟಲಾಗಿದೆ. ಎರಡು ರೀತಿಯಲ್ಲಿ ಬಿಲ್ ಕಟ್ಟಲು ಹೇಗೆ ಸಾಧ್ಯ? ಪಾಲಿಕೆಗೆ ಬರಬೇಕಾದ ಕೋಟ್ಯಂತರ ರೂಪಾಯಿ ನೀರಿನ ಕರವನ್ನು ಮರಳಿ ಪಡೆಯಬೇಕು’ ಎಂದೂ ಅವರು ಆಗ್ರಹಿಸಿದರು.
‘ಸದ್ಯ ಈ ವಿಷಯ ಪೆಂಡಿಂಗ್ ಇಡೋಣ. ಮತ್ತೊಂದು ಸಭೆ ಕರೆದು ಚರ್ಚಿಸೋಣ’ ಎಂದು ಮೇಯರ್ ಸಭೆ ಮುಂದಕ್ಕೆ ಹಾಕಿದರು.
ಬಂಜಾರ ಭವನಕ್ಕೆ ಭೂಮಿ: ನಗರದಲ್ಲಿ ಬಂಜಾರ ಭವನ ನಿರ್ಮಾಣಕ್ಕೆ 14 ಗುಂಟೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ, ಅದು ವ್ಯಾಜ್ಯದಲ್ಲಿ ಇದ್ದ ಕಾರಣ ಇನ್ನೂ ಭವನ ನಿರ್ಮಾಣವಾಗಿಲ್ಲ. ಈ ಬಗ್ಗೆ ಪಾಲಿಕೆ ಏನು ಕ್ರಮ ಕೈಗೊಂಡಿದೆ’ ಎಂದು ವಿಪಕ್ಷ ಸದಸ್ಯರು ಪ್ರಶ್ನೆ ಎತ್ತಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ‘ಬಂಜಾರ ಸಮಾಜಕ್ಕೆ ಪ್ರತ್ಯೇಕ 7 ಗುಂಟೆ ಜಾಗ ಗುರಿತಿಸಾಗಿದೆ. ಅದನ್ನು ತಾಂಡಾ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಬೇಕಿದೆ’ ಎಂದರು.
ಮಧ್ಯ ಪ್ರವೇಶಿಸಿದ ಶಾಸಕ ಆಸಿಫ್ ಸೇಠ್, ‘ಎಲ್ಲಿ ಜಾಗ ಖಾಲಿ ಇದೆ ಎಂದು ನೋಡಿಕೊಂಡು, ಆದಷ್ಟು ಬೇಗ ಆ ಸಮಾಜಕ್ಕೆ ಸಿಗುವಂತೆ ಮಾಡಿ. ಬರೀ ಮೂಗಿಗೆ ತುಪ್ಪ ಒರಿಸುವುದು ಬೇಡ’ ಎಂದು ಸೂಚಿಸಿದರು.
ಸಿಟಿಸ್ 2.0– ರಾಜ್ಯ ಸರ್ಕಾರವೇ ಹೊಣೆ: ಕೇಂದ್ರ ಪುರಸ್ಕೃತ ‘ಸ್ಮಾರ್ಟ್‌ಸಿಟಿ’ ಅಡಿ ಮಂಜೂರಾದ ‘ಸಿಟಿಸ್–2.0’ ಯೋಜನೆಗೆ ಅನುದಾನ ಒದಗಿಸುವ ಸಂಬಂಧ ಪಾಲಿಕೆಯಲ್ಲಿ ಶಾಸಕ ಅಭಯ ಪಾಟೀಲ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
‘ತ್ಯಾಜ್ಯ ವಿಲೇವಾರಿ ಸಂಬಂಧ ಸಿಟಿಸ್ 2.0 ಎಂಬ ₹135 ಕೋಟಿ ವೆಚ್ಚದ ಯೋಜನೆಗೆ ಬೆಳಗಾವಿ ನಗರವೂ ಆಯ್ಕೆಯಾಗಿದೆ. ಆದರೆ, ಪಾಲಿಕೆಯಿಂದ ಬರಬೇಕಾದ ಪಾಲು ಬಾರದ ಕಾರಣ ಯೋಜನೆ ವಿಳಂಬವಾಗಿದೆ’ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್ ಮಾಹಿತಿ ನೀಡಿದರು.
ಇದಕ್ಕೆ ತಿರುಗೇಟು ನೀಡಿದ ಅಭಯ ಪಾಟೀಲ, ‘ಕೇಂದ್ರ ಹಣಕಾಸು ಆಯೋಗದಿಂದ ಮಂಜೂರಾದ ಅನುದಾನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಬೇಕು. ಅದನ್ನು ಬಿಟ್ಟು ಪಾಲಿಕೆ ಮೇಲೆ ಹಾಕಿದರೆ ಹೇಗೆ? ವಿಳಂಬಕ್ಕೆ ಪಾಲಿಕೆ ಕಾರಣವಲ್ಲ. ಪಾಲಿಕೆಯಿಂದ ನೀಡಬೇಕಾದ ‘ಒನ್‌ಥರ್ಡ್’ ಪಾಲನ್ನು ನೀಡಲು ಸಿದ್ಧರಿದ್ದೇವೆ. ಆದರೆ, ರಾಜ್ಯ ಸರ್ಕಾರವೇ ಜಾರಿಕೊಳ್ಳುತ್ತಿದೆ. ಸರ್ಕಾರದ ಪಕ್ಷದವರಾದ ಶಾಸಕ ಆಸಿಫ್ ಸೇಠ್ ಅವರು ಮುತುವರ್ಜಿ ವಹಿಸಿ ಇದನ್ನು ಮಾಡಿಸಬೇಕು’ ಎಂದು ಆಗ್ರಹಿಸಿದರು.
ಆಸಿಫ್ ಸೇಠ್ ಸಭೆಯಲ್ಲಿದ್ದರೂ ಇದಕ್ಕೆ ಪ್ರತ್ಯುತ್ತರ ನೀರಲಿಲ್ಲ. ಉಪಮೇಯರ್ ವಾಣಿ ವಿಲಾಸ ಜೋಶಿ, ಪಾಲಿಕೆ ಆಯುಕ್ತ ಎಂ.ಕಾರ್ತಿಕ ಹಾಗೂ ಸದಸ್ಯರು ಪಾಲ್ಗೊಂಡರು.
ಸಿಗದ ಮಾಹಿತಿ: ಆರಂಭಕ್ಕೇ ಗದ್ದಲ
ಕಳೆದ ಬಾರಿ ಗೊತ್ತುವಳಿ ಮಂಡಿಸಿದ ವಿಷಯಗಳ ಲಿಖಿತ ಮಾಹಿತಿ ಕೇಳಿದರೆ ಅಧಿಕಾರಿಗಳು ಇನ್ನೂ ನೀಡಿಲ್ಲ. ಇಂಥವರಿಗೆ ಏನು ಶಿಕ್ಷೆ ಕೊಡುತ್ತೀರಿ ಎಂದು ಕಾಂಗ್ರೆಸ್‌ನ ಸದಸ್ಯ ಶಾಹಿದಖಾನ್ ಪಠಾಣ ಪ್ರಶ್ನೆ ಎತ್ತಿದರು.
‘ಮಾಹಿತಿ ಸಿದ್ಧವಿದೆ ಎಂದರೂ ಪಾಲಿಕೆ ಸದಸ್ಯರು ಪರಿಷತ್‌ನಲ್ಲೇ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ’ ಎಂದು ಅಧಿಕಾರಿ ಉತ್ತರಿಸಿದರು.
ಮಧ್ಯ ಪ್ರವೇಶ ಮಾಡಿದ ಸದಸ್ಯ ಹಣಮಂತ ಕೊಂಗಾಲಿ, ‘ವಿರೋಧ ಪಕ್ಷದ ಸದಸ್ಯರು ವಿನಾಕಾರಣ ಹರಟೆ ಮಾಡುತ್ತಿದ್ದಾರೆ. ಮಾಹಿತಿ ಸಿದ್ಧವಿದೆ ಎಂದರೂ ತೆಗೆದುಕೊಳ್ಳದೇ ಗೂಬೆ ಕೂರಿಸುತ್ತಿದ್ದಾರೆ. ಪರಿಷತ್ ಸಮಯ ಹಾಳು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದರು.
ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರೆಲ್ಲರೂ ವೇದಿಕೆ ಮುಂಭಾಗಕ್ಕೆ ನುಗ್ಗಿದರು. ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಕೊಂಗಾಲಿ ಅವರ ಮೇಲೆಯೇ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು. ಕೆಲಕಾಲ ಸಭೆಯಲ್ಲಿ ಗದ್ದಲ ಉಂಟಾಯಿತು.
‘ಎಲ್ಲರಿಗೂ ಸೂಕ್ತ ಮಾಹಿತಿ ಒದಗಿಸಲಾಗುವುದು. ನಾಳೆ ಹೋಳಿ ಹುಣ್ಣಿಮೆ ಇರುವ ಕಾರಣ ಸಭೆಯನ್ನು ಬೇಗ ಮುಗಿಸಿ, ಎಲ್ಲರೂ ಹಬ್ಬದ ಕೆಲಸಗಳಿಗೆ ಹೋಗೋಣ’ ಎಂದು ಹೇಳಿ ಮೇಯರ್ ಮಾತು ಮುಗಿಸಿದರು.
ಪತ್ರಕರ್ತರ ಆರೋಗ್ಯ ವಿಮೆಗೆ ಒಪ್ಪಿಗೆ
ಸಭೆಯಲ್ಲಿ ಪ್ರಶ್ನೆ ಎತ್ತಿದ ಶಾಸಕ ಅಭಯ ಪಾಟೀಲ, ‘ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪತ್ರಕರ್ತರಿಗೆ ಪಾಲಿಕೆ ಅನುದಾನದಲ್ಲಿ ಆರೋಗ್ಯ ವಿಮೆ ಕಾರ್ಡ್‌ಗಳನ್ನು ಕಳೆದ ಬಾರಿ ಮಾಡಿಸಲಾಗಿದೆ. ಅದೇ ಮಾದರಿಯನ್ನು ಈ ಬಾರಿಯೂ ಅನುಸರಿಸಬೇಕು. ಇದಕ್ಕೆ ಬೇರೆ ಯಾರಾದರೂ ತಕರಾರು ಮಾಡಿದರೆ ಸಭೆಯಲ್ಲಿ ಅದನ್ನು ಖಂಡಿಸಿ, ಗೊತ್ತುವಳಿ ಪಾಸ್ ಮಾಡಬೇಕು’ ಎಂದು ಆಗ್ರಹಿಸಿದರು.
‘ಪತ್ರಕರ್ತರು ಎಷ್ಟೋ ಸಾರಿ ಜೀವದ ಹಂಗು ತೊರೆದು ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ. ಅವರಿಗೆ ಅಪಾಯಗಳಾದಾಗ ಅನುಕೂಲವಾಗಲಿ ಎಂದು ಪಾಲಿಕೆಯಲ್ಲಿ ಸ್ವಲ್ಪ ಅನುದಾನ ಮೀಸಲು ಇಡಲಾಗಿದೆ. ಇದಕ್ಕೂ ತಕರಾರು ಮಾಡುವುದು ಮಾನವೀಯತೆ ಅಲ್ಲ. ನಾವೇನು ದೊಡ್ಡ ಬಂಡವಾಳ ಹಾಕುತ್ತಿಲ್ಲ. ಮಾನವೀಯತೆ ಹಿನ್ನೆಲೆಯಲ್ಲಿ ಅನುಕೂಲ ಮಾಡಬೇಕಿದೆ’ ಎಂದರು.
ಸಭೆಯಲ್ಲಿದ್ದ ಯಾರೊಬ್ಬರೂ ಇದಕ್ಕೆ ಚಕಾರ ಎತ್ತಲಿಲ್ಲ. ಆಗ ಸರ್ವಾನುಮತದ ಒಪ್ಪಿಗೆ ಇದೆ ಎಂದು ಮೇಯರ್ ಚರ್ಚೆ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.