ಸಾವು (ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೋಮವಾರ ಮಿನಿ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಓಡಿಸುತ್ತಿದ್ದ ಮಹಿಳೆ ಮೃತಪಟ್ಟ ಘಟನೆ ಸಂಭವಿಸಿದೆ.
ಅನಗೋಳದ ಬಾಬಲೆ ಗಲ್ಲಿಯ ಶೀಬಾ ವಾಸೀಮ್ ಇನಾಮದಾರ(30) ಮೃತರು.
‘ಶಾಲೆಯಿಂದ ಇಬ್ಬರು ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದರು. ಮಿನಿ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಶೀಬಾ ಮೃತಪಟ್ಟಿದ್ದಾರೆ. ಒಂದು ಮಗುವಿಗೆ ಸಣ್ಣ–ಪುಟ್ಟ ಗಾಯವಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ಬಂಧನ: ಬೆಳಗಾವಿ ತಾಲ್ಲೂಕಿನ ಅಷ್ಠೆ ಗ್ರಾಮದಲ್ಲಿ ಬೆಳಗಾವಿ–ಗೋಕಾಕ ರಸ್ತೆಯಲ್ಲಿ ಶನಿವಾರ ಪಾದಚಾರಿಯೊಬ್ಬರಿಗೆ ವಾಹನ ಹಾಯಿಸಿ ಪರಾರಿಯಾಗಿದ್ದ ಗೂಡ್ಸ್ ವಾಹನ ಚಾಲಕನನ್ನು ಮಾರಿಹಾಳ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ತಡೋಲಾ ಗ್ರಾಮದ ಸಂಜೀವಕುಮಾರ ಮಲ್ಲಿನಾಥ ಜಿಡಗೆ ಬಂಧಿತ. ಅಪಘಾತದಲ್ಲಿ ಪಾದಚಾರಿ ಸಾವನ್ನಪ್ಪಿದ್ದಾರೆ.
‘ಶನಿವಾರ ರಾತ್ರಿ 8ಕ್ಕೆ ಅಷ್ಠೆಯಲ್ಲಿ ಮಹಾದೇವ ಲೋಹಾರ(82) ನಡೆದುಕೊಂಡು ಹೋಗುತ್ತಿದ್ದರು. ಅವರಿಗೆ ಸಂಜೀವಕುಮಾರ ಡಿಕ್ಕಿ ಹೊಡೆದು, 1 ಕಿ.ಮೀ ದೂರದಲ್ಲಿ ಸಿದ್ಧೇಶ್ವರ ದೇವಸ್ಥಾನದ ಕಿರಿದಾದ ರಸ್ತೆಯಲ್ಲಿ ವಾಹನ ನಿಲ್ಲಿಸಿ ಪರಾರಿಯಾಗಿದ್ದ. ಕೆಲ ಸುಳಿವು ಆಧರಿಸಿ ಒಂದೇ ದಿನದಲ್ಲಿ ಆತನನ್ನು ಬಂಧಿಸಿದ್ದೇವೆ. ವಾಹನದ ಮಾಲೀಕರಾದ ಹೊನಗಾದ ಶಂಕರ ಪರಸುಚೆ ವಿರುದ್ಧ ದೂರು ದಾಖಲಿಸಿದ್ದೇವೆ’ ಎಂದು ಮಾರಿಹಾಳ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.