
ವಂಚನೆ
ಬೆಳಗಾವಿ: ಮುದ್ರಾ ಯೋಜನೆ ಅಡಿ ಸಾಲ ಮಂಜೂರು ಮಾಡಿಸುವುದಾಗಿ ನಂಬಿಸಿ, ಬ್ಯಾಂಕ್ ದಾಖಲೆಗಳನ್ನು ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ರಾಮಯ್ಯ ಬಡಾವಣೆ ನಿವಾಸಿ ದರ್ಶನ ಮಹದೇವ ಹಾಗೂ ಬಿಹಾರದ ಗಯಾ ಜಿಲ್ಲೆಯ ಬೋಧಗಯಾ ಗ್ರಾಮದ ರಾಹುಲಕುಮಾರ್ ರೋಷನ್ ಬಂಧಿತರು.
ಕಡಿಮೆ ಬಡ್ಡಿದರದಲ್ಲಿ ಮುದ್ರಾ ಅಡಿ ಸಾಲ ಮಂಜೂರು ಮಾಡಿಸುವುದಾಗಿ ಗೋಕಾಕ ತಾಲ್ಲೂಕಿನ ದುರದುಂಡಿ ಗ್ರಾಮದ ಹಾಲಪ್ಪ ದುರದುಂಡಪ್ಪ ಅಂತರಗಟ್ಟಿ ಅವರಿಂದ, ವಿವಿಧ ಶುಲ್ಕಗಳ ಹೆಸರಿನಲ್ಲಿ ₹7.45 ಲಕ್ಷ ಹಣ ಪಡೆದು ವಂಚಿಸಿದ್ದರು.
ಬಂಧಿತರಿಂದ ₹5 ಲಕ್ಷ ಹಣ, ವಂಚನೆಗೆ ಬಳಸಿದ ಮೊಬೈಲ್ ಮತ್ತು ಟ್ಯಾಬ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಬೈಕ್ ಸವಾರರ ಸಾವು: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಮೂರು ಬೈಕ್ ಅಪಘಾತಗಳಲ್ಲಿ ಮೂವರು ಸವಾರರು ಮೃತಪಟ್ಟಿದ್ದಾರೆ.
ಕಸನಾಳ– ಬೋರಗಾಂವ ರಸ್ತೆಯಲ್ಲಿ ದುರಸ್ತಿಗಾಗಿ ಹಾಕಿದ್ದ ಖಡಿಯ ಮಧ್ಯೆ ಬೈಕ್ ಅಪಘಾತಕ್ಕೀಡಾಗಿ ಮಹಾರಾಷ್ಟ್ರದ ಧತವಾಡದ ಬಾಳಾಸೋ ಮಹಾದೇವ ಮುದಾಳೆ (30) ಮೃತಪಟ್ಟಿದ್ದಾರೆ.
ಬಾಳಸೋ ಸೋಮವಾರ ರಾತ್ರಿ ಬೈಕಿನ ಮೇಲೆ ಮನೆ ಕಡೆಗೆ ಹೊರಟಿದ್ದರು. ಗುತ್ತಿಗೆದಾರ ಸದಾಶಿವ ಬೆನ್ನಾಳಿ ಎನ್ನುವವರು ಕಾಮಗಾರಿಗಾಗಿ ರಸ್ತೆ ಮೇಲೆಯೇ ಖಡಿ ಸುರಿದಿದ್ದರು. ಇದಕ್ಕೆ ಜಾರಿದ ಬೈಕ್ ಅಪಘಾತಕ್ಕೀಡಾಗಿ ಯುವಕ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ದೂರು ದಾಖಲಿಸಿದ್ದಾರೆ.
ಇನ್ನೊಂದೆಡೆ, ರಾಮದುರ್ಗ– ತಿಮ್ಮಾಪುರ ರಸ್ತೆಯ ಮೇಲೆ ಮುದಕವಿ ಗ್ರಾಮದ ಹತ್ತಿರ ಬೈಕ್ ಓಡಿಸುವಾಗಿ ಮಂಗ ಅಡ್ಡಬಂದ ಪರಿಣಾಮ ಕೆಳಕ್ಕೆ ಬಿದ್ದ ಸವಾರ ಎಂ.ತಿಮ್ಮಾಪುರದ ಮರಿಯಪ್ಪ ದುರ್ಗವ್ವ ಮಾದರ (48) ಮೃತಪಟ್ಟಿದ್ದಾರೆ.
ಬೈಕ್ ಡಿಕ್ಕಿ ಹೊಡೆದ ಕಾರಣ ಮಂಗ ಸ್ಥಳದಲ್ಲೇ ಸಾವಿಗೀಡಾಗಿದೆ. ಸವಾರ ಮರಿಯಪ್ಪ ಅವರನ್ನು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ಸುರೇಬಾನ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಗೋಕಾಕ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳವಿ ಗ್ರಾಮದ ಬಳಿ ನಿಂತಿದ್ದ ನೀರಿನ ಟ್ಯಾಂಕರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಂ.ಕೆ.ಹುಬ್ಬಳ್ಳಿಯ ಕುಮಾರ ಶಂಕರೆಪ್ಪ ಬಡಿಗೇರ (51) ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.