ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರೇಖಾ ಹೂಗಾರ, ಬ್ರಹ್ಮಾನಂದ(ನಂದು) ಮಿರಜಕರ, ಲಕ್ಷ್ಮೀ ರಾಠೋಡ, ಮಾಧವಿ ರಾಘೋಚೆ ಅವರಿಗೆ ಪುಚ್ಛಗುಚ್ಛ ನೀಡಿ ಅಭಿನಂದಿಸಲಾಯಿತು
ಪ್ರಜಾವಾಣಿ ಚಿತ್ರ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ನಾಲ್ಕೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು. ಈ ಪೈಕಿ ಮೂರು ಸ್ಥಾನಗಳಿಗೆ ಮಹಿಳೆಯರೇ ನೇಮಕಗೊಂಡರು.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರೇಖಾ ಹೂಗಾರ, ಸಾರ್ವಜನಿಕ ಆರೋತ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮೀ ರಾಠೋಡ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾಧವಿ ರಾಘೋಚೆ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬ್ರಹ್ಮಾನಂದ(ನಂದು) ಮಿರಜಕರ ಅವರು ಆಯ್ಕೆಗೊಂಡರು.
‘ಎಲ್ಲ ಸದಸ್ಯರು ಸೇರಿಕೊಂಡು, ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
58 ಸದಸ್ಯ ಬಲಾಬಲದ ಪಾಲಿಕೆಯಲ್ಲಿ ಬಿಜೆಪಿಯ 35 ಸದಸ್ಯರಿದ್ದಾರೆ. ಪಕ್ಷೇತರರಾಗಿ ಗೆದ್ದಿದ್ದ ಇಬ್ಬರು ಸದಸ್ಯರು ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ನಾಲ್ಕು ಸ್ಥಾಯಿ ಸಮಿತಿ ಬಿಜೆಪಿ ತೆಕ್ಕೆಗೆ ಬಂದವು.
ಆ.12ರಂದು ನಾಲ್ಕೂ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಪ್ರತಿ ಸಮಿತಿಗೆ ತಲಾ ಏಳು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅದರಲ್ಲಿ ತಲಾ ಐವರು ಬಿಜೆಪಿ ಸದಸ್ಯರು, ತಲಾ ಇಬ್ಬರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸದಸ್ಯರು ಇದ್ದರು.
ಸೋಮವಾರ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲೂ ನಾಲ್ಕೂ ಸ್ಥಾಯಿ ಸಮಿತಿಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು.
ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಹಾಗೂ ಇತರೆ ಸದಸ್ಯರು ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.