ಬೆಳಗಾವಿ: ‘ಬೆಳಗಾವಿ ನಾಡಹಬ್ಬದ ಶತಮಾನದ ಸುಸಂದರ್ಭವು ಆರು ವರ್ಷಗಳಲ್ಲಿ ಬರಲಿದ್ದು, ವಿಜೃಂಭಣೆಯಿಂದ ಆಚರಿಸಲು ಈಗಿನಿಂದಲೆ ಸಿದ್ಧತೆ ಆರಂಭಿಸಬೇಕು’ ಎಂದು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಲಹೆ ನೀಡಿದರು.
ನಾಡಹಬ್ಬ ಉತ್ಸವ ಸಮಿತಿಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ 94ನೇ ನಾಡಹಬ್ಬ ಉತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಲ್ಲಿನ ನಾಡಹಬ್ಬಕ್ಕೆ ಭವ್ಯ ಇತಿಹಾಸವಿದೆ. ಅದನ್ನು ಇಂದಿನ ಪೀಳಿಗೆಯವರೂ ಅರಿಯಬೇಕಾಗಿದೆ. ಅದಕ್ಕಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಅರ್ಥಪೂರ್ಣವಾಗಿ ಶತಮಾನೋತ್ಸವ ಆಚರಿಸಬೇಕು’ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಜಾರಿಗೊಳಿಸುವುದು ಸ್ವಾಗತಾರ್ಹ. ಎಲ್ಲ ಹಂತಗಳಲ್ಲೂ ಲಂಚಗುಳಿತನ, ಭ್ರಷ್ಟಾಚಾರ ತುಂಬಿದ್ದು ಅದನ್ನು ನಿವಾರಿಸದೆ ಯಾವ ಯೋಜನೆಯೂ ಯಶಸ್ವಿಯಾಗಲಾರದು’ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿಕ್ಷಣ ತಜ್ಞ ಪರಮೇಶ್ವರ ಹೆಗಡೆ, ‘ಭಾರತದಲ್ಲಿ ಶಿಕ್ಷಣ ಇದ್ದರೂ ಶಿಕ್ಷಣದಲ್ಲಿ ಭಾರತೀಯತೆ ಇಲ್ಲವಾಗಿದೆ. ಇದಕ್ಕೆ ಬ್ರಿಟಿಷರ ಕಾಲದ ಮೆಕಾಲೆ ಶಿಕ್ಷಣ ನೀತಿಯೇ ಕಾರಣ. ಈಗಿನ ಸರ್ಕಾರ ತರುತ್ತಿರುವ ನೂತನ ಶಿಕ್ಷಣ ನೀತಿ ಭಾರತೀಯ ಸಂಸ್ಕೃತಿ–ಪರಂಪರೆಯ ಹಿನ್ನೆಲೆಯಲ್ಲಿ ರೂಪುಗೊಂಡಿದೆ. ದೇಶದ ತಿರುಚಲಾದ ನಕಲಿ ಇತಿಹಾಸದ ಬದಲು ನಮ್ಮ ಮಕ್ಕಳು ನೈಜ ಇತಿಹಾಸವನ್ನು ಅರಿಯುವಂತೆ ಮಾಡುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷೆಯೂ ಆಗಿರುವ ಸಂಸದೆ ಮಂಗಲಾ ಸುರೇಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಪ್ರಿಯಾ ಪುರಾಣಿಕ, ಬಸವರಾಜ ಜಗಜಂಪಿ, ಎಲ್.ಎಸ್. ಶಾಸ್ತ್ರಿ, ಮಹೇಶ ಗುರನಗೌಡರ ಇದ್ದರು.
ನಾಡಹಬ್ಬ ಸಮಿತಿ ಕಾರ್ಯಾಧ್ಯಕ್ಷ ಡಾ.ಎಚ್.ಬಿ. ರಾಜಶೇಖರ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಕೆ. ಜೋರಾಪೂರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಗಾರ್ಗಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.