ADVERTISEMENT

ಬೆಳಗಾವಿ ಸಂಪೂರ್ಣ ಲಾಕ್‌‌ಡೌನ್: ಜನರಿಂದ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 12:30 IST
Last Updated 22 ಮೇ 2021, 12:30 IST
ಕೊರೊನಾ ವೈರಾಣು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಬೆಳಗಾವಿಯಲ್ಲಿ ಶನಿವಾರ ಸಂ‍ಪೂರ್ಣ ಲಾಕ್‌ಡೌನ್‌ ಘೋಷಿಸಿದ್ದರಿಂದ ರಾಣಿ ಚನ್ನಮ್ಮ ವೃತ್ತವು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆಚಿತ್ರ: ಡಿ.ಬಿ. ಪಾಟೀಲ
ಕೊರೊನಾ ವೈರಾಣು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಬೆಳಗಾವಿಯಲ್ಲಿ ಶನಿವಾರ ಸಂ‍ಪೂರ್ಣ ಲಾಕ್‌ಡೌನ್‌ ಘೋಷಿಸಿದ್ದರಿಂದ ರಾಣಿ ಚನ್ನಮ್ಮ ವೃತ್ತವು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆಚಿತ್ರ: ಡಿ.ಬಿ. ಪಾಟೀಲ   

ಬೆಳಗಾವಿ: ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಉದ್ದೇಶದಿಂದ ಜಿಲ್ಲಾಡಳಿತ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನವಾದ ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಶನಿವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಅದರಂತೆ ಪೊಲೀಸರು ಅನುಷ್ಠಾನಕ್ಕೆ ಕ್ರಮ ಕೈಗೊಂಡರು. ಬ್ಯಾರಿಕೇಡ್‌ಗಳನ್ನು ಹೆಚ್ಚಿಸಿ ಸಂಚಾರ ನಿರ್ಬಂಧಿಸಿದರು. ಬಹುತೇಕರು ಮನೆಗಳಲ್ಲೇ ಉಳಿದು ಸಹಕರಿಸಿದ್ದರಿಂದ ಜಿಲ್ಲೆಯು ಸ್ತಬ್ಧವಾಗಿತ್ತು.

ಆಸ್ಪತ್ರೆಗಳಿಗೆ, ಮೆಡಿಕಲ್ ಸ್ಟೋರ್‌ಗಳಿಗೆ ಹೋಗುವವರಿಗೆ ಮಾತ್ರ ಅವಕಾಶ ಕೊಟ್ಟರು. ಹಾಲಿನ ಅಂಗಡಿಗಳು ತೆರೆದಿದ್ದವು. ಜನರು ಹಾಗೂ ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಹಾಗೂ ಹೊರವಲಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬಂದಿದ್ದವರಿಗೆ ಪೊಲೀಸರು, ಬುದ್ಧಿವಾದ ಹೇಳಿ ಮನೆಗಳಿಗೆ ವಾಪಸ್ ಕಳುಹಿಸಿದರು. ಮಾಸ್ಕ್‌ ಧರಿಸದವರ ವಿರುದ್ಧ ಪ್ರಕರಣ ದಾಖಲಿಸಿದರು.

ADVERTISEMENT

ಎಪಿಎಂಸಿ ಮಾರುಕಟ್ಟೆ ಹಾಗೂ ಅಲ್ಲಲ್ಲಿ ಆರಂಭಿಸಿದ್ದ ತಾತ್ಕಾಲಿಕ ಸಗಟು ತರಕಾರಿ ಮಾರುಕಟ್ಟೆಗಳನ್ನು ಕೂಡ ಬಂದ್ ಮಾಡಿಸಲಾಗಿತ್ತು. ಮಾರುಕಟ್ಟೆಗಳಲ್ಲಿ ಚಟುವಟಿಕೆ ಇರಲಿಲ್ಲ. ರಸ್ತೆಬದಿಗಳಲ್ಲಾಗಲೀ, ತಳ್ಳುಗಾಡಿಗಳಲ್ಲಾಗಲಿ ತರಕಾರಿ ಅಥವಾ ಹಣ್ಣುಗಳನ್ನು ಮಾರುವುದಕ್ಕೂ ಅವಕಾಶ ಇರಲಿಲ್ಲ. ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯಗಳ ನಡುವೆ ಸಂಚರಿಸುವ ಸರಕು ಸಾಗಣೆ ವಾಹನಗಳಿಗೆ ಮಾತ್ರವೇ ಅವಕಾಶ ಕೊಡಲಾಗಿತ್ತು. ಔಷಧಿ ಅಂಗಡಿಗಳ ಬಳಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿಲ್ಲ.

ಲಾಕ್‌ಡೌನ್‌ ನಡುವೆಯೂ ಅನವಶ್ಯವಾಗಿ ಸಂಚರಿಸುತ್ತಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು. ವಾಹನಗಳನ್ನು ಜಪ್ತಿ ಮಾಡಿದರು.

ಲಾಕ್‌ಡೌನ್‌ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ಡಿಸಿಪಿ ವಿಕ್ರಂ ಅಮಟೆ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಡಿಸಿಪಿ, ‘ಸಂಪೂರ್ಣ ಲಾಕ್‌ಡೌನ್‌ ಆದೇಶವನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಕ್ರಮ ವಹಿಸಲಾಗಿದೆ. ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಲಾಕ್‍ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸುತ್ತೇವೆ. ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಭಾನುವಾರವೂ ಸಂಪೂರ್ಣ ಲಾಕ್‌ಡೌನ್‌ ಮುಂದುವರಿಯಲಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.