ADVERTISEMENT

ಬೆಳಗಾವಿ | ಪಾಲಿಕೆಗೆ ಕರವೇ ಕಾರ್ಯಕರ್ತರ ಮುತ್ತಿಗೆ

ನಾಮಫಲಕದಲ್ಲಿ ಕನ್ನಡ ಕಡೆಗಣಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:55 IST
Last Updated 17 ಸೆಪ್ಟೆಂಬರ್ 2025, 2:55 IST
<div class="paragraphs"><p>ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು&nbsp;ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಕ್ತರ ಕೊಠಡಿಗೆ ನುಗ್ಗಲು&nbsp; ಯತ್ನಿಸಿದರು&nbsp;</p></div>

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಕ್ತರ ಕೊಠಡಿಗೆ ನುಗ್ಗಲು  ಯತ್ನಿಸಿದರು 

   

 ಪ್ರಜಾವಾಣಿ ಚಿತ್ರ

ಬೆಳಗಾವಿ: ‘ನಗರದಲ್ಲಿ ಈಚೆಗೆ ನಡೆದ ಗಣೇಶೋತ್ಸವ ಮತ್ತು ಈದ್-ಮಿಲಾದ್ ವೇಳೆ ಅಳವಡಿಸಿದ್ದ ನಾಮಫಲಕ, ಹೋರ್ಡಿಂಗ್‌ ಮತ್ತು ಬ್ಯಾನರ್‌ಗಳಲ್ಲಿ ಕನ್ನಡ ಕಡೆಗಣಿಸಿ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಬಳಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು ಮಹಾನಗರ ಪಾಲಿಕೆ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.

ADVERTISEMENT

ಕಚೇರಿಯೊಳಗಿನ ಆಯುಕ್ತರ ಕೊಠಡಿಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆಗ ಪರಸ್ಪರ ವಾಗ್ವಾದ ನಡೆಯಿತು.  

‘ರಾಜ್ಯ ಭಾಷಾ ನೀತಿ ಹಾಗೂ ಸರ್ಕಾರಿ ಆದೇಶ ಜಾರಿಗೊಳಿಸುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದಾರೆ. ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ‘ನಾಮಫಲಕ, ಹೋರ್ಡಿಂಗ್‌ ಮತ್ತು ಬ್ಯಾನರ್‌ಗಳಲ್ಲಿ ಶೇ 60ರಷ್ಟು ಕನ್ನಡವನ್ನೇ ಆದ್ಯತೆಯಾಗಿ ಬಳಸಬೇಕು. ಹಬ್ಬದ ಸಮಯದಲ್ಲಿ ಹೆಚ್ಚಿನವರು ಈ ನಿಯಮ ಪಾಲಿಸಿಲ್ಲ. ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಪಾಲಿಕೆ ಆಯುಕ್ತೆ ಬಿ. ಶುಭ ಮಾತಣಾಡಿ, ‘ಎಲ್ಲ ವ್ಯಾಪಾರ ಪರವಾನಗಿಗಳ ನವೀಕರಣ ಸಮಯದಲ್ಲಿ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸಿರುವುದನ್ನು ಖಚಿತ ಪಡಿಸಿಕೊಳ್ಳುತ್ತೇವೆ. ಹಬ್ಬದ ಸಮಯದಲ್ಲಿ ಅಳವಡಿಸಿದ ನಾಮಫಲಕ, ಹೋರ್ಡಿಂಗ್‌ ಮತ್ತು ಬ್ಯಾನರ್‌ಗಳಲ್ಲಿ ಭಾಷೆ ಬಳಕೆ ಕುರಿತಾಗಿ  ಸರ್ಕಾರದಿಂದ ಸ್ಪಷ್ಟತೆ ಬೇಕಿದೆ. ಜಿಲ್ಲಾಧಿಕಾರಿ ಜತೆಗೆ ಈ ವಿಷಯ ಚರ್ಚಿಸುತ್ತೇವೆ’ ಎಂದು ತಿಳಿಸಿದರು.

ಮುಖಂಡರಾದ ಸುರೇಶ ಗವನ್ನವರ, ಹೊಳೆಪ್ಪ ಸುಲಧಾಳ, ನಿಂಗರಾಜ ಗುಂಡ್ಯಾಗೋಳ,  ವಿನಾಯಕ ಭೋವಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.