ADVERTISEMENT

ಬೆಳಗಾವಿ: ಪಿಡಬ್ಲ್ಯುಡಿ ಇಲಾಖೆ ಎಇ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 8:31 IST
Last Updated 18 ಡಿಸೆಂಬರ್ 2020, 8:31 IST
ದಾಖಲೆಗಳನ್ನು ಪರಿಶೀಲಿಸುತ್ತಿರುವ ಎಸಿಬಿ ಅಧಿಕಾರಿಗಳು
ದಾಖಲೆಗಳನ್ನು ಪರಿಶೀಲಿಸುತ್ತಿರುವ ಎಸಿಬಿ ಅಧಿಕಾರಿಗಳು   

ಬೆಳಗಾವಿ: ಇಲ್ಲಿನ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪ ವಿಭಾಗ–1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮನೋಜ ಸುರೇಶ ಕವಳೇಕರ ಅವರ ಕಚೇರಿ ಹಾಗೂ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

‘ಬಲ್ಲ ಮೂಲಗಳಿಗಿಂತ ಹೆಚ್ಚಿನ ಅಸಮತೋಲನ ಆಸ್ತಿಪಾಸ್ತಿ ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದಂತೆ ಗುರುವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶುಕ್ರವಾರ ಐದು ಸ್ಥಳಗಳ ಮೇಲೆ ಏಕಕಾಲಕ್ಕೆ ತಂಡಗಳು ದಾಳಿ ನಡೆಸಿವೆ’ ಎಂದು ಮಾಹಿತಿ ನೀಡಿದ್ದಾರೆ.

‘ಈ ಅಧಿಕಾರಿ ಕುಟುಂಬ ಸಮೇತ ವಾಸವಿರುವ ಇಲ್ಲಿನ ಅಯೋಧ್ಯನಗರದ ವಿಜಯ ಆಸ್ಪತ್ರೆ ಸಮೀಪವಿರುವ ಮನೆ, ಅವರ ಸಹೋದರಿ ಜ್ಯೋತಿ ಕವಳೇಕರ ವಾಸವಿರುವ ಅಯೋಧ್ಯನಗರದ ಮನೆ, ಮತ್ತೊಬ್ಬ ಸಹೋದರಿ ರಾಜಶ್ರೀ ಎಸ್. ಕವಳೇಕರ ವಾಸವಿರುವ ಮಹಾದ್ವಾರ ರಸ್ತೆಯ ಮಲ್ಹಾರ ರೆಸಿಡೆನ್ಸಿಯ ಪ್ಲ್ಯಾಟ್‌ ನಂ.ಎಸ್–10, ಅಧಿಕಾರಿ ಕರ್ತವ್ಯ ನಿರ್ವಹಿಸುವ ಕಚೇರಿ ಮತ್ತು ಸಹೋದರಿ ರಾಜಶ್ರೀ ಅವರ ಹೆಸರಿನಲ್ಲಿರುವ ಖಾನಾಪುರ ತಾಲ್ಲೂಕು ಸಂಗರಗಾಳಿ ಗ್ರಾಮದಲ್ಲಿರುವ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ.

ADVERTISEMENT

ಅವರು ಹೊಂದಿರುವ ಆಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಅವರಿಗೆ ಸಂಬಂಧಿಸಿದ ಆಸ್ತಿಗಳ ಇತರ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರಿದಿದೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.