
ಬೆಳಗಾವಿ: ಇಲ್ಲಿನ ಮರಾಠಾ ಮಂಡಳ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ (ಹಲಗೇಕರ) ಅವರಿಗೆ ಶಿಕ್ಷಣ ಕ್ಷೇತ್ರ, ಸಣ್ಣನಿಂಗಪ್ಪ ಮುಶೆನ್ನಗೋಳ ಹಾಗೂ ಪುಂಡಲೀಕ ಶಾಸ್ತ್ರಿ ಅವರಿಗೆ ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಗೋಕಾಕ ತೆಳಗಿನಹಟ್ಟಿ ಗ್ರಾಮದವರಾದ ಸಣ್ಣನಿಂಗಪ್ಪ ಸತ್ಯಪ್ಪ ಮುಶನ್ನಗೋಳ ಅವರು 75 ವರ್ಷದ ಹಿರಿಯರು. ಬಾಲ್ಯದಲ್ಲಿಯೇ ಡೊಳ್ಳಿನ ಹಾಡುಗಳನ್ನು ಹಾಡುತ್ತ ಬೆಳೆದವರು. ಡೊಳ್ಳಿನ ಹಾಡಿನ ಮೂಲಕ ಪ್ರಸಿದ್ದರಾದ ಅವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಾಗೂ ಹಲವಾರು ಜನಪ್ರಿಯ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಹಲವಾರು ಸಂಘ– ಸಂಸ್ಥೆಗಳು ಗೌರವಿಸಿವೆ. ಜೀವಮಾನದ ಸಾಧನೆ ಪರಿಗಣಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಬೆಳಗಾವಿ ನಗರದ ನಿವಾಸಿ ಪುಂಡಲೀಕ ಶಾಸ್ತ್ರೀ ಅವರಿಗೂ ಜಾನಪದ ಕಲಾ ಪ್ರಕಾರದಲ್ಲಿ ಪ್ರಶಸ್ತಿ ನೀಡಲಾಗಿದೆ. ಅಳಿವಿನಂಚಿಗೆ ತಲುಪಿದ ಬುಡಬುಡಕೆ ಕಲೆಯನ್ನು ಅವರು ಪೋಷಿಸಿಕೊಂಡು ಬಂದಿದ್ದಾರೆ.
ಪುಂಡಲೀಕ ಅವರು ಗೋಂಧಳಿಗರ ಕಥೆ ಹೇಳುವುದು, ದೇವಿಪದಗಳನ್ನು ಹಾಡುವುದು, ಅಲೆಮಾರಿ, ಅರೆ ಅಲೆಮಾರಿ ಗೋಂಧಳಿ ಬುಡುಬುಡುಕಿ ಮಾಡುತ್ತ ಬಂದಿದ್ದಾರೆ. ಶಕುನಶಾಸ್ತ್ರ ಹೇಳುವುದು, ಹಕ್ಕಿಪಣ ಕಟ್ಟುವುದು, ಹಾಲಕ್ಕಿ ಶಕುನ ನುಡಿಯುವುದು ಇವರ ಪೂರ್ವಜರ ಕುಲಕಸಬು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಶ್ರೀ ವಿಠ್ಠಲನ ಆರಾಧನೆ, ಕೀರ್ತನೆ, ಹರಿನಾಮ ಸ್ವರಣೆ ಮಾಡುತ್ತ, ಪಂಢರಪುರಕ್ಕೆ ಪಾದಯಾತ್ರೆ ಮಾಡುತ್ತಾರೆ. ಧಾರ್ಮಿಕ ಪದ್ಧತಿ ಇವರ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ. ಈ ಪದ್ಧತಿಯನ್ನೂ ಈಗಲೂ ಮುನ್ನಡೆಸಿಕೊಂಡು ಬಂದಿದ್ದಾರೆ.
ಶಿಕ್ಷಣ ಕ್ಷೇತ್ರ: ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರ ಪತ್ನಿ, ಮರಾಠ ಮಂಡಳ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷೆ ರಾಜಶ್ರೀ ಅವರಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. 18 ವರ್ಷಗಳಿಂದ ಸಂಸ್ಥೆ ಮುನ್ನಡೆಸುತ್ತಿದ್ದಾರೆ. ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ಮುಂತಾದೆ ಶಾಲೆ, ಕಾಲೇಜುಗಳು ಸೇರಿ 40 ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ.
ಬುದ್ಧಿಮಾಂದ್ಯ ಮಕ್ಕಳ ಅಭಿವೃದ್ಧಿಗಾಗಿ ಸಮರ್ಥನಂ ಸಂಸ್ಥೆಗೆ ಸುಮಾರು 8 ಸಾವಿರ ಚದರ್ ಅಡಿ ಜಾಗ ದೇಣಿಗೆ ನೀಡಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದಾರೆ. 2016ರಲ್ಲಿ 15,800 ವಿದ್ಯಾರ್ಥಿಗಳೊಂದಿಗೆ ಸಮವಸ್ತ್ರದಲ್ಲಿ ಏಕಕಾಲಕ್ಕೆ ಐದು ದೇಶಭಕ್ತಿ ಗೀತೆಗಳನ್ನು ಹಾಡಿಸಿ ವಿಶ್ವದಾಖಲೆ ಮಾಡಿದ್ದಾರೆ. ಈ ದಾಖಲೆ ಏಷ್ಯಾ ಬುಕ್ ಅಫ್ ರೆಕಾರ್ಡ್ಸ್, ವಿಶ್ವ ರೆಕಾರ್ಡ್ಸ್ ಇಂಡಿಯಾ, ಇಂಡಿಯನ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗಳಿಗೂ ಪಾತ್ರವಾಗಿದೆ.
ಹಿರಿಯರಿಗೆ ಸಲ್ಲದ ಪ್ರಶಸ್ತಿ: ಆಕ್ಷೇಪ
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಅರ್ಹ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಕನ್ನಡ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿರಿಯ ಸಾಹಿತಿಗಳೂ ಗಡಿಯಲ್ಲಿ ಕನ್ನಡ ಅಸ್ಮಿತೆಗೆ ಹೋರಾಡಿದ ಬಿ.ಎಸ್.ಗವಿಮಠ ಬಸವರಾಜ ಜಗಜಂಪಿ ಹಾಗೂ ಎಲ್.ಎಸ್.ಶಾಸ್ತ್ರಿ ಅವರಂಥ ಹಿರಿಯರನ್ನು ಕಡೆಗಣಿಸಲಾಗಿದೆ. ಕನ್ನಡ ಹೋರಾಟಗಾರರು ಸೂಚಿಸಿದ ಹೆಸರುಗಳನ್ನು ಬಿಟ್ಟು ರಾಜಕಾರಣಿಗಳ ಲಾಬಿಗೆ ಮಣೆ ಹಾಕಲಾಗಿದೆ. ಎಂದೂ ರಾಜ್ಯೋತ್ಸವ ಆಚರಿಸದವರನ್ನೂ ಪರಿಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.