
ಬೆಳಗಾವಿಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಕುಣಿದು ಕುಪ್ಪಳಿಸಿದರು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ಎಲ್ಲಿ ನೋಡಿದರೂ ಜನ, ಎತ್ತ ನೋಡಿದರೂ ಸಂಭ್ರಮ, 5 ಲಕ್ಷಕ್ಕೂ ಹೆಚ್ಚು ಕನ್ನಡಾಭಿಮಾನಿಗ ಸಂತಸ, ನೆಲ ನಡುಗಿಸುವಂಥ ಸಂಗೀತ, ಹಾಡು, ಯುವಜನರ ನೃತ್ಯೋತ್ಸಾಹ, ಉಕ್ಕೇರಿ ಬಂದ ಅಭಿಮಾನದ ಹೊಳೆ...
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶನಿವಾರ ಕಂಡುಬಂದ ರಾಜ್ಯೋತ್ಸವ ಸಡಗರದ ದೃಶ್ಯಗಳಿವು. ಶುಕ್ರವಾರ ರಾತ್ರಿ 12ಕ್ಕೆ ಆರಂಭವಾದ ವೈಭವ ಶನಿವಾರ ತಡರಾತ್ರಿಯವರೆಗೂ ಮುಂದುವರಿಯಿತು. ಗಡಿಯಲ್ಲಿ ನಾಡದೇವಿ ಭುವನೇಶ್ವರಿಯ ವೈಭವ ಮರುಕಳಿಸಿತು.
ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಉತ್ಸವಕ್ಕೆ ಚಾಲನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಯುವತಿಯರು, ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವಕ್ಕೆ ಸಾಕ್ಷಿಯಾದರು.
ನಗರದೆಲ್ಲೆಡೆ ಜೈಕಾರಗಳು ಮುಗಿಲು ಮುಟ್ಟಿದವು. ಕಂಡಷ್ಟೂ ದೂರ ಕನ್ನಡ ಬಾವುಟಗಳ ಹಾರಾಟವೇ ಗೋಚರಿಸಿತು. ಎಲ್ಲೆಲ್ಲೂ ಕನ್ನಡ ಝೇಂಕಾರ ಮೊಳಗಿತು. ಕೆಂಪು- ಹಳದಿ ಬಣ್ಣದ ದಿರಿಸು ಧರಿಸಿ ಬಂದ ಹಲವರು ಕನ್ನಡ ಧ್ವಜವನ್ನು ಪ್ರತಿನಿಧಿಸುವಂತೆ ಕಂಡರು.
ಯುವಕರು ಹಣೆಗೆ ಕೆಂಪು– ಹಳದಿ ತಿಲಕ ಇಟ್ಟುಕೊಂಡರೆ; ಯುವತಿಯರು ತಾವೇನೂ ಕಮ್ಮಿ ಇಲ್ಲ ಎಂಬಂತೆ ಕನ್ನಡ ಧ್ಚಜದ ಬಣ್ಣ ಬಳಿದುಕೊಂಡು ಖುಷಿಪಟ್ಟರು. ಜನರಿಂದ ರಸ್ತೆಗಳು, ವೃತ್ತಗಳು, ಚೌಕಗಳು, ಮನೆಯ ಮಹಡಿಗಳು ಕಿಕ್ಕಿರಿದು ತುಂಬಿದವು. ಪರಿಣಾಮ ನಗರದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್ ಆಯಿತು.
ನಾಡದೇವಿ ಭುವನೇಶ್ವರಿ, ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾತ, ಹಳಗನ್ನಡ ಕವಿಗಳು, ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು, ಹಂಪಿಯ ಕಲ್ಲಿನ ರಥ, ಕದಂಬರ ದೇವಸ್ಥಾನ, ಧರ್ಮಸ್ಥಳ ಕ್ಷೇತ್ರ, ಆಪರೇಷನ್ ಸಿಂಧೂರದ ಕಲಾಕೃತಿ, ಕಾಂತಾರ ಚಿತ್ರದ ವೇಷಧಾರಿಗಳು... ಹೀಗೆ ವೈವಿಧ್ಯ ರೂಪಕಗಳು ಗಮನಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.