ADVERTISEMENT

ಹೊಸ ವರ್ಷಾಚರಣೆಗೆ ಬೆಳಗಾವಿ ಸಜ್ಜು; ನಗರದಾದ್ಯಂತ ಕಟ್ಟೆಚ್ಚರ

4ರಿಂದ 15 ಅಡಿ ಎತ್ತರದ ಓಲ್ಡ್‌ಮ್ಯಾನ್‌ಗಳು ಸಿದ್ಧ, ಹೋಟೆಲ್‌, ಕ್ಲಬ್‌ಗಳಲ್ಲಿ ನಡೆಯಲಿರುವ ರಾತ್ರಿ ಪಾರ್ಟಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 2:58 IST
Last Updated 31 ಡಿಸೆಂಬರ್ 2025, 2:58 IST
ಬೆಳಗಾವಿಯ ಕ್ಯಾಂಪ್‌ ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ ದಹಿಸಲು ಓಲ್ಡ್‌ಮ್ಯಾನ್‌ ಪ್ರತಿಕೃತಿ ಸಿದ್ಧ ಮಾಡಲಾಗುತ್ತಿದೆ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಕ್ಯಾಂಪ್‌ ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ ದಹಿಸಲು ಓಲ್ಡ್‌ಮ್ಯಾನ್‌ ಪ್ರತಿಕೃತಿ ಸಿದ್ಧ ಮಾಡಲಾಗುತ್ತಿದೆ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ನಗರ ಪೊಲೀಸ್‌ ಕಮಿಷನರೇಟ್‌ ಕಟ್ಟೆಚ್ಚರ ವಹಿಸಿದೆ.

ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ನಗರದ ಪ್ರತಿಷ್ಠಿತ ಹೋಟೆಲ್‌ಗಳು, ಕ್ಲಬ್‌ಗಳಲ್ಲಿ ‘ನ್ಯೂ ಇಯರ್‌ ಪಾರ್ಟಿ’ಗಳನ್ನು ಆಯೋಜಿಸುತ್ತಿದ್ದು, ಎಂಟ್ರಿ ಪಾಸ್‌ಗಳನ್ನು ಇರಿಸಲಾಗಿದೆ. ಪಾರ್ಟಿಗಳಲ್ಲಿ ಭಾಗವಹಿಸಲು ದಂಪತಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ದರ ನಿಗದಿಪಡಿಸಲಾಗಿದೆ.

ಹೋಟೆಲ್‌ಗಳಲ್ಲಿ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಸಸ್ಯಾಹಾರ ಮತ್ತು ಮಾಂಸಾಹಾರದ ವ್ಯವಸ್ಥೆ ಮಾಡಲಾಗಿದೆ. ಕೆಲವರು ನಗರದ ಹೊರವಲಯದ ಕೃಷಿಭೂಮಿಗಳಲ್ಲೂ ರಾತ್ರಿ ಪಾರ್ಟಿಗೆ ಯೋಜಿಸಿದ್ದಾರೆ.

ADVERTISEMENT

ಓಲ್ಡ್‌ಮ್ಯಾನ್‌ ಪ್ರತಿಕೃತಿ:ಹೊಸ ವರ್ಷದ ಹಿನ್ನೆಲೆಯಲ್ಲಿ ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿ ವೈವಿಧ್ಯಮಯ ವಿನ್ಯಾಸಗಳ ಓ‌ಲ್ಡ್‌ಮ್ಯಾನ್‌ ಪ್ರತಿಕೃತಿ ಸಿದ್ಧವಾಗಿವೆ. ಬುಧವಾರ ಮಧ್ಯರಾತ್ರಿ 12ಕ್ಕೆ ಅದನ್ನು ದಹಿಸುವ ಮೂಲಕ ಹೊಸವರ್ಷ ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿವಿಧ ಬಡಾವಣೆಗಳಲ್ಲಿ ತಯಾರಿ ನಡೆದಿದೆ.

‘ನಮ್ಮಲ್ಲಿ ಕಳೆದೊಂದು ತಿಂಗಳಿಂದ 4 ಅಡಿಯಿಂದ 15 ಅಡಿ ಎತ್ತರದ ಓಲ್ಡ್‌ಮ್ಯಾನ್‌ ಪ್ರತಿಕೃತಿಗಳನ್ನು ಸಿದ್ಧಪಡಿಸಿದ್ದೇವೆ. ₹1 ಸಾವಿರದಿಂದ ₹8 ಸಾವಿರದವರೆಗೆ ದರವಿದೆ. ಬೆಳಗಾವಿ ಮಾತ್ರವಲ್ಲದೆ, ಧಾರವಾಡ–ಹುಬ್ಬಳ್ಳಿ,  ಗೋವಾದ ಗ್ರಾಹಕರು ಖರೀದಿಸಿದ್ದಾರೆ’ ಎಂದು ಪ್ರತಿಕೃತಿಗಳ ತಯಾರಕರಾದ ಅಮಿತ ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಾದ್ಯಂತ ಬಿಗಿ ಭದ್ರತೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರದಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಾಲ್ವರು ಡಿಎಸ್‌ಪಿ 24 ಇನ್‌ಸ್ಪೆಕ್ಟರ್‌ 34 ಸಬ್‌ ಇನ್‌ಸ್ಪೆಕ್ಟರ್‌ 89 ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ 660 ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ 300 ಗೃಹರಕ್ಷಕ ದಳ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದು 7 ಸಿಎಆರ್‌ ಮತ್ತು 3 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.  ‘ಡಿ.31ರಂದು ನಗರದಲ್ಲಿ ಪ್ರತಿ ಚಟುವಟಿಕೆ ಮೇಲೆ ನಿಗಾ ಇರಿಸಲು ಹೆಚ್ಚಿನ ಸಿ.ಸಿ.ಟಿ.ವಿ ಕ್ಯಾಮೆರಾ ಡ್ರೋನ್‌ ಕ್ಯಾಮೆರಾ ಬಳಸಲಾಗುತ್ತಿದೆ. ಬಾರ್‌ ರೆಸ್ಟೋರೆಂಟ್‌ಗಳಲ್ಲಿ ಅಪ್ರಾಪ್ತರಿಗೆ ಮದ್ಯ ಕೊಡುವುದನ್ನು ನಿಷೇಧಿಸುವಂತೆ ಸೂಚಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.