ADVERTISEMENT

ಬೇಸಿಗೆ ಆರಂಭದಲ್ಲೇ ಬೆಳಗಾವಿ ಜಿಲ್ಲೆಯ ಮೂರು ಜಲಾಶಯಗಳಲ್ಲಿ ತಗ್ಗಿದ ನೀರಿನ ಸಂಗ್ರಹ

ಇಮಾಮ್‌ಹುಸೇನ್‌ ಗೂಡುನವರ
Published 20 ಫೆಬ್ರುವರಿ 2026, 8:10 IST
Last Updated 20 ಫೆಬ್ರುವರಿ 2026, 8:10 IST
<div class="paragraphs"><p>ಸವದತ್ತಿ ಪಟ್ಟಣದ ಬಳಿ ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು&nbsp; </p></div>

ಸವದತ್ತಿ ಪಟ್ಟಣದ ಬಳಿ ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು 

   

ಪ್ರಜಾವಾಣಿ ಚಿತ್ರ: ಬಿ.ಎಂ.ಶಿರಸಂಗಿ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಮೂರು ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇದೆ. ಮಿತವಾಗಿ ನೀರು ಬಳಸದಿದ್ದರೆ, ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ತಲೆದೋರುವ ಸಾಧ್ಯತೆ ಇದೆ.

ADVERTISEMENT

‘ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯ, ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದ ನೀರು ಜುಲೈ ಅಂತ್ಯದವರೆಗೆ ಮತ್ತು ರಕ್ಕಸಕೊಪ್ಪ ಜಲಾಶಯದ ನೀರು ಜೂನ್‌ ಮಧ್ಯದವರೆಗೆ ಕುಡಿಯುವ ಉದ್ದೇಶಕ್ಕಾಗಿ ಸಾಕಾಗಲಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ‘ಕೃಷಿಗಾಗಿ ಕಾಲುವೆಗಳಿಗೆ ಹೆಚ್ಚಿನ ನೀರು ಹರಿಸಿದರೆ, ಪರಿಸ್ಥಿತಿ ನಿಭಾಯಿಸುವುದು ಕಷ್ಟ’ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ.

14 ಟಿಎಂಸಿ ಅಡಿ: 34.36 ಟಿಎಂಸಿ ಅಡಿ(ಲೈವ್‌ ಸ್ಟೋರೇಜ್‌) ಗರಿಷ್ಠ ಸಂಗ್ರಹ ಸಾಮರ್ಥ್ಯದ ನವಿಲುತೀರ್ಥ ಜಲಾಶಯದಿಂದ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳ ನಗರ, ಪಟ್ಟಣಗಳಿಗೆ ನೀರು ಪೂರೈಕೆಯಾಗುತ್ತದೆ. ಈಗ ಕುಡಿಯುವ ಉದ್ದೇಶಕ್ಕಾಗಿ 194 ಕ್ಯೂಸೆಕ್‌, ಕಾಲುವೆಗಳಿಗೆ 1,747 ಕ್ಯೂಸೆಕ್‌ ಸೇರಿ 1,941 ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ.

ಕಳೆದ ವರ್ಷ ಫೆ.15ರಂದು ಜಲಾಶಯದಲ್ಲಿ 17.12 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈಗ 14.71 ಟಿಎಂಸಿ ಅಡಿ (2.41 ಟಿಎಂಸಿ ಅಡಿ ಕಡಿಮೆ) ನೀರು ಸಂಗ್ರಹವಿದೆ.

ಹಿಡಕಲ್‌ನಲ್ಲಿದೆ 24 ಟಿಎಂಸಿ ಅಡಿ: 48.98 ಟಿಎಂಸಿ ಅಡಿ(ಲೈವ್ ಸ್ಟೋರೇಜ್‌) ಸಾಮರ್ಥ್ಯದ ಹಿಡಕಲ್‌ ಡ್ಯಾಂನಲ್ಲಿ ಫೆ.15ರಂದು 24.20 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 26.22 ಟಿಎಂಸಿ ಅಡಿ ನೀರು ಲಭ್ಯವಿತ್ತು.

ಈ ಜಲಾಶಯದಿಂದ ಕುಡಿಯಲು ಮತ್ತು ಕೃಷಿಗಾಗಿ ಕಾಲುವೆಗಳಿಗೆ ನಿತ್ಯ 3,316 ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ.

ಸವದತ್ತಿ ಪಟ್ಟಣದ ಬಳಿ ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು  ಪ್ರಜಾವಾಣಿ ಚಿತ್ರ: ಬಿ.ಎಂ.ಶಿರಸಂಗಿ
ಕುಡಿಯುವ ಉದ್ದೇಶಕ್ಕಾಗಿಯೇ ನಮ್ಮಲ್ಲಿ 6.5 ಟಿಎಂಸಿ ಅಡಿ ನೀರು ಕಾಯ್ದಿರಿಸಿದ್ದೇವೆ. ಬೇಸಿಗೆ ಅಂತ್ಯದವರೆಗೆ ಜನರಿಗೆ ಬೇಡಿಕೆಯಷ್ಟು ನೀರು ಪೂರೈಸಲು ಕ್ರಮ ವಹಿಸಿದ್ದೇವೆ
ಬಿ.ಕೆ.ಜಗದೀಶ ಎಇಇ ಹಿಡಕಲ್‌ ಜಲಾಶಯ
ಕಳೆದ ವರ್ಷಕ್ಕಿಂತ ಕಡಿಮೆ ನೀರು ಲಭ್ಯವಿರಬಹುದು. ಆದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಿದ್ದೇವೆ
ವಿವೇಕ ಮುದಿಗೌಡರ ಎಇಇ ನವಿಲುತೀರ್ಥ ಜಲಾಶಯ

ಬೆಳಗಾವಿಯಲ್ಲಿ ಈಗಲೇ ಬವಣೆ ಶುರು

ಬೆಳಗಾವಿಗರ ದಾಹ ನೀಗಿಸುವ ರಕ್ಕಸಕೊಪ್ಪ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ 0.8 ಅಡಿ ಕಡಿಮೆ ನೀರು ಲಭ್ಯವಿದೆ. 2475 ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 2468.6 ಅಡಿ ನೀರು ಸಂಗ್ರಹವಿತ್ತು. ಈಗ 2467.8 ಅಡಿ ಇದೆ. ನಗರದಲ್ಲಿ ವಿವಿಧ ಬಡಾವಣೆಗಳಿಗೆ ಐದು ದಿನಗಳಿಗೊಮ್ಮೆ ನೀರು ಪೂರೈಕೆಯಾಗಬೇಕು. ಆದರೆ ವಿವಿಧ ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ  ‘ಅಲ್ಲಲ್ಲಿ ಕುಡಿಯುವ ನೀರು ಪೈಪ್‌ಲೈನ್‌ ಹಾಳಾಗಿ ಸಮಸ್ಯೆಯಾಗುತ್ತಿರುವುದು ನಿಜ. ಆದರೆ ನೀರು ಕಡಿಮೆ ಸಂಗ್ರಹವಿದೆ ಎಂದು ಪೂರೈಕೆಯಲ್ಲಿ ನಾವಾಗಿಯೇ ತಡ ಮಾಡುತ್ತಿಲ್ಲ’ ಎನ್ನುತ್ತಾರೆ.  ‘ಬೆಳಗಾವಿ ಮಹಾನಗರದಲ್ಲಿ 75500 ನೀರಿನ ಸಂಪರ್ಕಗಳಿವೆ. ಹಿಡಕಲ್‌ನಿಂದ 70 ರಕ್ಕಸಕೊಪ್ಪದಿಂದ 42 ಸೇರಿದಂತೆ 112 ಎಂಎಲ್‌ಡಿ ನೀರನ್ನು ನಿತ್ಯ ಪೂರೈಸಲಾಗುತ್ತಿದೆ. ಲಭ್ಯ ನೀರನ್ನೇ ಬೇಸಿಗೆ ಅಂತ್ಯದವರೆಗೆ ಪೂರೈಸಲು ಪ್ರಯತ್ನ ನಡೆಸಿದ್ದೇವೆ. ಆದರೆ ಜನರೂ ಮಿತವಾಗಿ ಬಳಸಬೇಕು’ ಎಂದು ಎಲ್‌ ಆ್ಯಂಡಿ ಟಿ ಕಂಪನಿ ಅಧಿಕಾರಿ ಬಿ.ಪಿ.ರವಿಕುಮಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.