ADVERTISEMENT

ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಫಿಕ್ಸ್ ಮಾಡಿ ಬ್ಲಾಕ್‌ಮೇಲ್! ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 13:45 IST
Last Updated 5 ಫೆಬ್ರುವರಿ 2026, 13:45 IST
<div class="paragraphs"><p>ಬಂಧಿತ ಆರೋಪಿಗಳು</p></div>

ಬಂಧಿತ ಆರೋಪಿಗಳು

   

ಬೆಳಗಾವಿ: ಇಲ್ಲಿನ ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ ಅವರ ಖಾಸಗಿತನದ ವಿಡಿಯೊಗಳನ್ನು ಚಿತ್ರೀಕರಿಸಿ, ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಯೂ ಟೂಬರ್ಸ್‌ಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಗೋಕಾಕನ ಅಬ್ದುಲ್‌ರಷೀದ್‌ ನಜರ್‌ ಅಹಮದ್‌ ಮಕಾನದಾರ (51), ಸಮೀರ್‌ ನಿಸಾರ್‌ಅಹಮದ್ ಶೇಖ್‌ (32), ಗೋಕಾಕ ತಾಲ್ಲೂಕು ಘಟಪ್ರಭಾ ಮೊಹಮ್ಮದ್‌ ದಿಲಾವರ ನಜೀರ್‌ಅಹಮದ್‌ ಬಾಳೇಕಿಂದ್ರಿ (45) ಬಂಧಿತರು. ಆರೋಪಿಗಳಿಂದ ವಿಡಿಯೊ ತುಣುಕುಗಳು, ಮೈಕ್ರೊ ಸೀಕ್ರೆಟ್‌ ಕ್ಯಾಮೆರಾಗಳು, ಲ್ಯಾ‍ಪ್‌ಟಾಪ್‌, ಪೆನ್‌ಡ್ರೈವ್‌, ಮೊಬೈಲ್‌, ಚಿಪ್‌ಗಳು, ಸಿಮ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಇವರ ತಂಡದಲ್ಲಿ ಇನ್ನೂ ಯಾರಿದ್ದಾರೆ? ಇಷ್ಟೆಲ್ಲ ಜಾಲ ಹೆಣೆಯಲು ಯಾರ ಸಹಾಯ ಪಡೆದಿದ್ದಾರೆ, ಯಾರಿಗೆ ವಿಡಿಯೊ ಹಂಚಿದ್ದಾರೆ ಎಂಬ ವಿವರಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ಅಪರಾಧಿಗಳು ಯಾರೇ ಆಗಿದ್ದರೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ಮಾಹಿತಿ ನೀಡಿದರು.

ನಡೆದಿದ್ದೇನು?: ನಗರದಲ್ಲಿ ವಾಸವಾಗಿರುವ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತನೊಂದಿಗೆ ತಮ್ಮ ಮನೆಯಲ್ಲಿ ಖಾಸಗಿ ಕ್ಷಣಗಳನನ್ನು ಕಳೆಯುತ್ತಿದ್ದರು. ಪ್ರತಿ ದಿನ ಕಚೇರಿಗೆ ಹೋಗುವ ಮುನ್ನ ಮನೆಯ ಕೀಲಿ ಹಾಕಿ, ಅದ ಬೀಗವನ್ನು ಪಕ್ಕದ ಕಿಟಕಿಯಲ್ಲೇ ಇಟ್ಟು ಹೋಗುತ್ತಿದ್ದರು. ಮನೆಯ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಈ ವಿಷಯವನ್ನು ಯೂಟೂಬರ್‌ಗಳಿಗೆ ತಿಳಿಸಿದ್ದ.

ಹೊಂಚುಹಾಕಿದ ಮೂವರೂ ಯೂಟೂಬರ್‌ಗಳು ಅಧಿಕಾರಿ ಮನೆ ಪ್ರವೇಶಿಸಿ, 11 ಕಡೆ ಬಲ್ಬ್‌ ಹೋಲ್ಡರ್‌ಗಳಲ್ಲಿ 11 ರಹಸ್ಯ ಕ್ಯಾಮೆರಾಗಳನ್ನು ಇಟ್ಟಿದ್ದರು. ಮಹಿಳಾ ಅಧಿಕಾರಿ ತಮ್ಮ ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದರು. ಅವುಗಳನ್ನು ತೋರಿಸಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಎಲ್ಲ ಸುದ್ದಿವಾಹನಿಗಳನ್ನು ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು.

ಈ ಬಗ್ಗೆ ಮಹಿಳಾ ಅಧಿಕಾರಿ ಇಲ್ಲಿನ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಇನ್‌ಸ್ಪೆಕ್ಟರ್‌ ಬಿ.ಆರ್.ಗಡ್ಡೇಕರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.