ADVERTISEMENT

ಭಾರಿ ಮಳೆಗೆ ತತ್ತರಿಸಿದ ಬೆಳಗಾವಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:20 IST
Last Updated 7 ಆಗಸ್ಟ್ 2019, 14:20 IST
   

ಬೆಳಗಾವಿ: ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಧಾರಾಕಾರ ಮಳೆ ಬುಧವಾರವೂ ಮುಂದುವರಿದಿದೆ. ಇದರ ಜೊತೆಗೆ ದಕ್ಷಿಣ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣವು 3,46 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ.

ಅಥಣಿ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಕೃಷ್ಣಾ ನದಿ ದಾಟುತ್ತಿದ್ದ ಬಾಲಕ ನೀರು ಪಾಲಾಗಿದ್ದಾನೆ. ಗೋಕಾಕ ತಾಲ್ಲೂಕಿನ ಲೊಳಸೂರ ಗ್ರಾಮದಲ್ಲಿ ಮನೆ ಕುಸಿದು ಮಹಿಳೆಯೊಬ್ಬರು, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಸಮೀಪದ ಚಂದನಹೊಸೂರಿನಲ್ಲಿ ಮನೆ ಕುಸಿದಿದ್ದರಿಂದ ಯುವಕನೊಬ್ಬ ಸಾವಿಗೀಡಾಗಿದ್ದಾರೆ. ಹುಕ್ಕೇರಿಯ ಬೈರಾಪುರದ ಕೆರೆಯಲ್ಲಿ ಮಂಗಳವಾರ ಸಂಜೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಿದ್ದಿದ್ದ ಯುವಕನ ಶವ ಬುಧವಾರ ದೊರೆತಿದೆ.

ಶಾಲೆಗಳು ಹಾಗೂ ಕಾಲೇಜುಗಳಿಗೆ ನೀಡಲಾಗಿದ್ದ ರಜೆಯನ್ನು ಶನಿವಾರದವರೆಗೆ ವಿಸ್ತರಿಸಲಾಗಿದೆ. ಬೆಳಗಾವಿಯ ಹಲವು ಪ್ರದೇಶಗಳಲ್ಲಿ 4 ಅಡಿಗಳಷ್ಟು ನೀರು ನಿಂತುಕೊಂಡಿದೆ. ರಾಷ್ಟ್ರೀಯ ವಿಕೋಪ ಪರಿಹಾರ ಪಡೆಯ ಸಿಬ್ಬಂದಿ ಬೋಟ್‌ ಬಳಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಮಳೆ ನೀರು ಪಂಪ್‌ಹೌಸ್‌ ಒಳಗೆ ನುಗ್ಗಿದ್ದರಿಂದ ನಗರದಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ.

ADVERTISEMENT

ರಸ್ತೆಗಳು ಕುಸಿದಿದ್ದರಿಂದ ಬೆಳಗಾವಿಯಿಂದ ಮಹಾರಾಷ್ಟ್ರ ಹಾಗೂ ಗೋವಾ ಕಡೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತಿನೈಘಾಟ್‌ ಬಳಿ ಹಾನಿಗೊಳಗಾಗಿದ್ದ ರೈಲ್ವೆ ಹಳಿಯ ಒಂದು ಮಾರ್ಗವನ್ನು ದುರಸ್ತಿ ಮಾಡಲಾಗಿದ್ದು, ರೈಲುಗಳನ್ನು ಓಡಿಸಲಾಗುತ್ತಿದೆ. ರೈಲ್ವೆಗಳು ವಿಳಂಬವಾಗಿ ಸಂಚರಿಸುತ್ತಿವೆ.

ಮಾರ್ಕಂಡೇಯ ಹಾಗೂ ಘಟಪ್ರಭಾ ಉಕ್ಕಿ ಹರಿದಿದ್ದು, ಗೋಕಾಕ ನಗರದ ತಗ್ಗುಪ್ರದೇಶಗಳು ಜಲಾವೃತವಾಗಿವೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಚೇರಿಯೊಳಗೂ ನೀರು ನುಗ್ಗಿದೆ. ಬೆಳಗಾವಿ, ಬೈಲಹೊಂಗಲ, ಖಾನಾಪುರ, ಚಿಕ್ಕೋಡಿ, ಅಥಣಿ, ನಿಪ್ಪಾಣಿ, ರಾಯಬಾಗ ತಾಲ್ಲೂಕುಗಳ ಸುಮಾರು 106 ಗ್ರಾಮಗಳಲ್ಲಿ ನೀರು ನುಗ್ಗಿದೆ. ಹಲವು ಮನೆಗಳು ಹಾನಿಗೊಳಗಾಗಿವೆ. ಇದುವರೆಗೆ 22,682 ಜನರನ್ನು ಹಾಗೂ 9,519 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ 79 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 6,970 ಜನರು ಆಶ್ರಯ ಪಡೆದಿದ್ದಾರೆ.

ದಕ್ಷಿಣ ಮಹಾರಾಷ್ಟ್ರದ ಕೃಷ್ಣಾ, ದೂಧ್‌ಗಂಗಾ, ವೇದಗಂಗಾ ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ರಾಜ್ಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಜನರನ್ನು ಜಿಲ್ಲಾಡಳಿತವು ಸ್ಥಳಾಂತರಿಸುತ್ತಿದೆ.

ಮಳೆ ವಿವರ (ಮಿ.ಮೀ.ಗಳಲ್ಲಿ):

ಮಹಾರಾಷ್ಟ್ರ: ಕೊಯ್ನಾ– 249, ಕಾಳಮ್ಮವಾಡಿ– 146, ರಾಧಾನಗರಿ– 220, ಮಹಾಬಳೇಶ್ವರ– 232, ಪಾಟಗಾಂವ– 217, ವಾರಣಾ– 235, ನವಜಾ– 265 ಮಳೆಯಾಗಿದೆ.

ಬೆಳಗಾವಿ ಜಿಲ್ಲೆ: ರಾಕಸಕೊಪ್ಪ– 257, ಜಾಂಬೋಟಿ– 237, ಕಣಕುಂಬಿ– 211, ಉಚಗಾಂವ– 200, ನಾಗರಾಗಳಿ– 177, ಖಾನಾಪುರ– 171.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.