ADVERTISEMENT

ಬೆಳಗಾವಿ: ಶಿವಾಜಿ ಪ್ರತಿಮೆ ಧ್ವಂಸಕ್ಕೆ ಯತ್ನಿಸಿದ ನಾಲ್ವರು ಯುವಕರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 16:38 IST
Last Updated 20 ಡಿಸೆಂಬರ್ 2021, 16:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ತಾಲ್ಲೂಕಿನ ಹೊನಗಾ ಗ್ರಾಮದಲ್ಲಿ ನಾಲ್ವರು ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಧ್ವಂಸ ಮಾಡಲು ಸೋಮವಾರ ಯತ್ನಿಸಿದ್ದರಿಂದ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಂಜೆ ಪ್ರತಿಮೆಯ ಕಟ್ಟೆಯೇರಿದ ಆ ಯುವಕರು ಗಲಾಟೆ ಆರಂಭಿಸಿದ್ದಾರೆ. ಪ್ರತಿಮೆ ಧ್ವಂಸ ಮಾಡಲು ಅವರು ಮುಂದಾದರು ಎನ್ನಲಾಗುತ್ತಿದೆ. ಅದನ್ನು ಗಮನಿಸಿದ ಸ್ಥಳೀಯರು ಅವರಿಗೆ ತಡೆ ಒಡ್ಡಿದ್ದಾರೆ. ಕಾಕತಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಅವರು ಬಂದ ಬಳಿಕ ಆರೋಪಿಗಳನ್ನು ‍ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಹೊನಗಾದಲ್ಲಿ ಶಿವಾಜಿ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ.‌ ಆದರೆ, ಗ್ರಾಮಸ್ಥರ ಮಾಹಿತಿ‌‌ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಕಾಕತಿ ಸಿಪಿಐ ಗುರುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆ ಯುವಕರು, ‘ನೀವು ಕರ್ನಾಟಕದವರೋ, ಮಹಾರಾಷ್ಟ್ರದವರೋ? ಈ ಊರು ಕರ್ನಾಟಕದಲ್ಲಿದೆಯೋ, ಮಹಾರಾಷ್ಟ್ರದಲ್ಲೋ ಎಂದು ಕನ್ನಡದಲ್ಲಿ ಕೇಳುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರ‍್ಯಾರೋ ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.